ಬೆಂಗಳೂರು : ಸತತ 17 ವರ್ಷಗಳ ಕಾಲ ಕಪ್ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಿನ್ನೆ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಅಹಮದಾಬಾದ್ ನಲ್ಲಿ ನಿನ್ನೆ ರಾತ್ರಿ ನಡೆದ ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ 6 ಗೆಲುವು ಸಾಧಿಸಿದ ಆರ್ಸಿಬಿ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಆರ್ಸಿಬಿ ಕಪ್ ಗೆಲ್ಲಲು ಪ್ರತಿಯೊಬ್ಬ ಆಟಗಾರನ ಸಾಕಷ್ಟು ಶ್ರಮವಿದೆ. ಅದರಲ್ಲೂ ಅಭಿಮಾನಿಗಳ ಪ್ರೀತಿಗೆ ತಲೆಬಾಗಿ ರನ್ ಮಷೀನ್ ವಿರಾಟ್ ಕೊಹ್ಲಿ ಅವರು ಒಂದೇ ಒಂದು ತಂಡಕ್ಕೆ ಸುಧೀರ್ಘವಾಗಿ 18 ವರ್ಷಗಳ ಕಾಲ ಆಡಿರುವುದು ದೊಡ್ಡ ದಾಖಲೆ. ಇದೀಗ ಆರ್ಸಿಬಿ ಈ ಒಂದು 2025ನೇ ಐಪಿಎಲ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ತವರಿನ ಪಂದ್ಯಗಳನ್ನು ಹೊರತುಪಡಿಸಿ ಹೊರಗಿನ ಮೈದಾನದಲ್ಲಿ ಸತತವಾಗಿ ಗೆಲುವು ಸಾಧಿಸಿದ್ದು ಮತ್ತೊಂದು ದಾಖಲೆ ನಿರ್ಮಿಸಿದೆ.
ಹೌದು ಐಪಿಎಲ್ ಸೀಸನ್ವೊಂದರಲ್ಲಿ ತವರಿನ ಹೊರಗೆ ಸತತ 9 ಪಂದ್ಯಗಳನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದ ಮತ್ತೊಂದು ತಂಡವಿಲ್ಲ. ಅಂದರೆ ಆರ್ಸಿಬಿ ತಂಡವು ಐಪಿಎಲ್ನಲ್ಲಿ ಈವರೆಗೆ ಯಾರಿಂದಲೂ ಕೂಡ ಸಾಧ್ಯವಾಗದ ಗೆಲುವಿನ ನಾಗಾಲೋಟದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಎದುರಾಳಿ ತಂಡಗಳ ತವರು ಮೈದಾನದಲ್ಲಿ 7 ಜಯ ಹಾಗೂ ತವರಿನ ಹೊರಗೆ ನಡೆದ ಪ್ಲೇಆಫ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಹೊಮ್ಮಿದೆ. ಅದು ಕೂಡ 17 ವರ್ಷಗಳ ಕಾಯುವಿಕೆಯ ಬಳಿಕ ಎಂಬುದು ವಿಶೇಷ.