ಬೆಂಗಳೂರು: ಮಂಡ್ಯದಲ್ಲಿ ಚಾಲಕನೊಬ್ಬ ರೀಲ್ಸ್ ನೋಡುತ್ತಲೇ ಸಾರಿಗೆ ಬಸ್ ಚಾಲನೆ ಮಾಡಿದ್ದರ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌ ವರದಿ ಪ್ರಕಟಿಸಿತ್ತು. ಮಂಡ್ಯದಲ್ಲಿ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಲೇ ಬಸ್ ಓಡಿಸಿದ ‘KSRTC’ ಚಾಲಕ! ಎಂಬುದಾಗಿ ಸುದ್ದಿ ಪ್ರಕಟಿಸಿದ್ದನ್ನು ಗಮನಿಸಿದಂತ ನಿಗಮವು, ಚಾಲಕನನ್ನು ಅಮಾನತುಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿಸಿಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರೀಲ್ಸ್ ನೋಡಿಕೊಂಡು ಬಸ್ ಚಾಲನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದರು. ಅದರಂತೆ ಚಾಲಕ ಮಹೇಶ್.ವಿ ಅವರನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದೆ.
ಘಟನೆ: ಮಳವಳ್ಳಿ ಯಿಂದ ಮೈಸೂರಿಗೆ ಹೋಗುತ್ತಿದ್ದ ಮಾರ್ಗ ಸಂಖ್ಯೆ 79 ರಲ್ಲಿ ಬಸ್ ಚಲಾಯಿಸುತ್ತಿದ್ದ ಮಹೇಶ್ ವಿ, ಚಾಲಕ-ಕಂ-ನಿರ್ವಾಹಕ , ಬಿಲ್ಲೆ ಸಂಖ್ಯೆ 699, ಮಳವಳ್ಳಿ ಘಟಕ, ಮಂಡ್ಯ ವಿಭಾಗರವರು ಬಸ್ ಚಾಲನೆ ಮಾಡುವಾಗ ರೀಲ್ಸ್ ವೀಕ್ಷಣೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ರಸ್ತೆಯಲ್ಲಿ ಸಂಭವಿಸುವ ಸಾಕಷ್ಟು ಅಪಘಾತಗಳು ಬೇಜವಾಬ್ದಾರಿತನ/ ನಿರ್ಲಕ್ಷ್ಯದ ಚಾಲನೆಯಿಂದ ಘಟಿಸುತ್ತವೆ. ಸಾರ್ವಜನಿಕ ಸಾರಿಗೆಯ ಬಸ್ಸಿನಲ್ಲಿ ಚಾಲಕನ ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ವರ್ತನೆಗೆ ನಿಗಮವು ಅವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿದೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ತಿಳಿಸಿದೆ.








