ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಕಣ್ಣಂಪಾಳಯಂ ಕೆರೆಯ ಬಳಿ 10 ವರ್ಷದ ಬಾಲಕಿಯೊಬ್ಬಳ ಶವ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಕಳೆದ ಗುರುವಾರ (ಮೇ 21) ಸಂಜೆಯಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಅಪಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಆಟವಾಡುತ್ತಿದ್ದ ಬಾಲಕಿಯ ಅಪಹರಣ ಮತ್ತು ಕೊಲೆ
ವರದಿಗಳ ಪ್ರಕಾರ, ಬಾಲಕಿಯು ತನ್ನ ಮನೆಯ ಸಮೀಪ ಆಟವಾಡುತ್ತಿದ್ದಾಗ ಇಬ್ಬರು ಆರೋಪಿಗಳು ಆಕೆಯನ್ನು ಅಪಹರಿಸಿದ್ದರು. ಬಾಲಕಿಯ ತಂದೆಯ ಸೋದರ ಪಳನಿಸಾಮಿ ನೀಡಿರುವ ಮಾಹಿತಿ ಪ್ರಕಾರ, ಗುರುವಾರ ಸಂಜೆ ಹತ್ತಿರದ ಅಂಗಡಿಯಿಂದ ಹಿಂದಿರುಗಿದ ನಂತರ ಬಾಲಕಿ ನಾಪತ್ತೆಯಾಗಿದ್ದಾಡು ಎಂಬ ವಿಷಯ ಕುಟುಂಬಸ್ಥರಿಗೆ ತಿಳಿದುಬಂದಿತ್ತು. ತಕ್ಷಣವೇ ಹುಡುಕಾಟ ಆರಂಭಿಸಿದ ಕುಟುಂಬಕ್ಕೆ, ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಆಘಾತಕಾರಿ ಸುದ್ದಿ ಸಿಕ್ಕಿದೆ. ಪೊಲೀಸರು ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಮತ್ತು ಕಾರ್ತಿಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮುಖ್ಯಮಂತ್ರಿ ವಿಜಯ್ ತೀವ್ರ ಆಕ್ರೋಶ, ಶೀಘ್ರ ಚಾರ್ಜ್‌ಶೀಟ್‌ಗೆ ನಿರ್ದೇಶನ
ಈ ಭೀಕರ ಘಟನೆಯ ಕುರಿತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ತಮಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಹೇಳಿರುವ ಅವರು, “ಇದು ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಕೃತ್ಯವಾಗಿದೆ. ನಮ್ಮ ಸಮಾಜದಲ್ಲಿ ಇಂತಹ ಕೃತ್ಯಗಳನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ಮೃತ ಬಾಲಕಿಯ ಕುಟುಂಬಸ್ಥರಿಗೆ ತೀವ್ರ ಸಂತಾಪ ಸೂಚಿಸಿರುವ ಸಿಎಂ ವಿಜಯ್, “ಈಗಾಗಲೇ ಇಬ್ಬರು ಅಪರಾಧಿಗಳನ್ನು ಬಂಧಿಸಲಾಗಿದೆ. ಈ ಘಟನೆಯ ಕುರಿತು ಶೀಘ್ರ ಮತ್ತು ಆಳವಾದ ತನಿಖೆ ನಡೆಸಿ, ತಕ್ಷಣವೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವಂತೆ ನಾನು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಇಂತಹ ಜುಗುಪ್ಸಾಕರ ಕೃತ್ಯಗಳಲ್ಲಿ ತೊಡಗುವವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಸರ್ಕಾರ ದೃಢವಾಗಿ ಕೆಲಸ ಮಾಡಲಿದೆ” ಎಂದು ಭರವಸೆ ನೀಡಿದ್ದಾರೆ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ರಸ್ತೆ ತಡೆ ಪ್ರತಿಭಟನೆ
ಬಾಲಕಿಯ ನಿಗೂಢ ಕೊಲೆಯಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆ ತಡೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಸ್ಥಳದಿಂದ ಚದುರಿಸಿದ್ದು, ರಾಜಿ ಸಂಧಾನಕ್ಕಾಗಿ ಪೋಷಕರನ್ನು ಸುಲೂರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಆದರೆ, ನಮಗೆ ಯಾವುದೇ ರಾಜಿ ಬೇಡ, ಕೇವಲ ನ್ಯಾಯ ಬೇಕು ಎಂದು ಬಾಲಕಿಯ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ. “ನಾವು ಪೋಷಕರಿಗೆ ಯಾವುದೇ ಪೇಪರ್‌ಗಳಿಗೆ ಸಹಿ ಮಾಡದಂತೆ ಮತ್ತು ಯಾರಿಂದಲೂ ಏನನ್ನೂ ಪಡೆಯದಂತೆ ಹೇಳಿದ್ದೇವೆ. ನಮಗೆ ಕೇವಲ ನ್ಯಾಯ ಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಕಣ್ಣಾರೆ ನೋಡಬೇಕಿದೆ” ಎಂದು ಮೃತ ಬಾಲಕಿಯ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ ಸುಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಸಿದ್ಧರಾಮಯ್ಯ








