ಬೆಂಗಳೂರು : ಇತ್ತೀಚಿಗೆ ಮಂಡ್ಯದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಮಿಮ್ಸ್)ಯ ಇಬ್ಬರು ವಿದ್ಯಾರ್ಥಿಗಳು ಕೇವಲ ಎರಡೇ ವಾರಗಳ ಅಂತರದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು.ಈ ಹಿನ್ನೆಲೆ, ರಾಜ್ಯದ ವೈದ್ಯಕೀಯ ಹಾಸ್ಟೆಲ್‌ಗಳಲ್ಲಿರುವ ಸೀಲಿಂಗ್ ಫ್ಯಾನ್‌ಗಳಲ್ಲಿ ಆತ್ಮಹತ್ಯೆ ನಿರೋಧಕ ಸಾಧನಗಳನ್ನು ಅಳವಡಿಸುವುದು ಎಂದು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಮಂಡ್ಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನಾವಳಿಗಳು ನನಗೆ ತೀವ್ರ ಬೇಸರ ಮೂಡಿಸಿವೆ. ಒತ್ತಡ, ಆತಂಕ ಮತ್ತು ಮಾನಸಿಕ ಖಿನ್ನತೆಗಳಿಂದ ವಿದ್ಯಾರ್ಥಿಗಳು ಇಂಥ ನಿರ್ಧಾರ ತೆಗೆದುಕೊಳ್ಳುತ್ತಿರುವುದು ದುರದೃಷ್ಟಕರ. ಭವಿಷ್ಯದಲ್ಲಿ ಈ ರೀತಿಯ ಘಟನಾವಳಿಗಳನ್ನು ತಡೆಗಟ್ಟಲು ಮೆಡಿಕಲ್ ಹಾಸ್ಟೆಲ್ ಗಳ ಸೀಲಿಂಗ್ ಫ್ಯಾನ್‌ಗಳಿಗೆ ಆತ್ಮಹತ್ಯೆ ನಿರೋಧಕ ಸಾಧನಗಳೂ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದರು.
ಡಾ.ಸಂಜೀವ್ ಅವರ ನೇತೃತ್ವದ ಆರ್ ಜಿಯುಹೆಚ್ ಎಸ್ ನ ಪಠ್ಯಕ್ರಮ ಅಭಿವೃದ್ಧಿ ಕೋಶವು ಜುಲೈ ತಿಂಗಳಾಂತ್ಯದಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಇಂಥದ್ದೊಂದು ಪ್ರಸ್ತಾವನೆಯನ್ನು ಸಿದ್ಧಪಡಿಸಲು ಮಿಮ್ಸ್ ಗೆ ಭೇಟಿ ನೀಡಿತ್ತು. ಆದರೆ ಇಂಥ ಸಾಧನಗಳನ್ನು ಅಳವಡಿಸಲು ಆಗುವ ವೆಚ್ಚ ಹಾಗು ಯೋಜನೆಯ ವಿವರಗಳು ಲಭ್ಯವಾಗಿಲ್ಲ. ಇಂಥ ಕ್ರಮವನ್ನು ಇತರೆ ಹಾಸ್ಟೆಲ್‌ಗಳಿಗೆ ವಿಸ್ತರಿಸುವ ಮೊದಲು ಮಿಮ್ಸ್ ನಲ್ಲಿ ಪ್ರಯೋಗಾತ್ಮಕವಾಗಿ ಅಳವಡಿಸುವ ಕುರಿತು ಚರ್ಚೆಗಳಾಗಿವೆ ಎಂದು ತಿಳಿದುಬಂದಿದೆ.