ನವದೆಹಲಿ: ದಕ್ಷಿಣ ಗೋವಾದ ಕಾಂಗ್ರೆಸ್ ಅಭ್ಯರ್ಥಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಮತ್ತು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಗೋವಾದ ಕಾಂಗ್ರೆಸ್ ಅಭ್ಯರ್ಥಿ ವಿರಿಯಾಟೊ ಫರ್ನಾಂಡಿಸ್, ಪೋರ್ಚುಗೀಸ್ ಆಡಳಿತದಿಂದ ವಿಮೋಚನೆಗೊಂಡ ನಂತರ ಭಾರತೀಯ ಸಂವಿಧಾನವನ್ನು ಗೋವಾದ ಮೇಲೆ ಬಲವಂತವಾಗಿ ಹೇರಲಾಯಿತು ಮತ್ತು 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿಗೆ ನಾನು ಸಾಕಷ್ಟು ಹೇಳಿದ್ದೆ ಎಂದು ಹೇಳಿದ್ದರು.
ಛತ್ತೀಸ್ಗಢದ ಮಹಾಸಮುಂದ್ನಲ್ಲಿ ಮಂಗಳವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಭಾರತದ ಸಂವಿಧಾನವು ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಕಾಂಗ್ರೆಸ್ನ ಗೋವಾ ಅಭ್ಯರ್ಥಿ ಹೇಳುತ್ತಿದ್ದಾರೆ. ಸಂವಿಧಾನವನ್ನು ಗೋವಾದ ಮೇಲೆ ಬಲವಂತವಾಗಿ ಹೇರಲಾಗಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಇದನ್ನು ಅವರು ಈ ಹಿಂದೆ ಕಾಂಗ್ರೆಸ್ನ ‘ಶಹಜಾದಾ’ (ರಾಜಕುಮಾರ) ಗೆ ಹೇಳಿದ್ದರು” ಎಂದು ಅವರು ಹೇಳಿದ್ದಾರೆ.