ತುಮಕೂರು : ಇದೇ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದ್ದು ಈ ಕುರಿತಂತೆ ರಾಜ್ಯದಲ್ಲಿ ರಾಮ ರಾಜಕೀಯ ನಡೆಯುತ್ತಿದ್ದು ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ನಡುವೆ ವಾಕ್ಸಮರ ಏರ್ಪಟ್ಟಿದೆ. ಇದರ ಮಧ್ಯ ಅಯೋಧ್ಯೆ ರಾಮಮಂದಿರ ವಿಚಾರವಾಗಿ ಬಿಜೆಪಿ ನಡೆಯನ್ನು ಟೀಕಿಸುವ ಭರದಲ್ಲಿ ಭಗವಾನ್ ಶ್ರೀರಾಮನನ್ನು ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ ಅವಮಾನಿಸಿದ್ದಾರೆ.
ತುಮಕೂರಿನಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಒಂದು ಟೆಂಟ್ ಅಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತಾ ಹೇಳ್ತಿದ್ರು. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು ಎಂದು ಹೇಳಿಕೆ ನೀಡಿದ್ದಾರೆ.
ಅಂದು ನಾನು ಅಲ್ಲಿಗೆ ಕಾಲಿಟ್ಟಾಗ ಯಾವುದೇ ರೀತಿಯಾದಂತಹ ಭಕ್ತಿ ಹುಟ್ಟಿಲ್ಲ ಆದರೆ ಈಗಿನ ಕಾಲದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಅಲ್ಲಿ ನಮಗೆ ದೇವರ ಮೇಲೆ ಭಯ ಹಾಗೂ ಭಕ್ತಿ ಉಂಟಾಗುತ್ತದೆ ಆದರೆ ಅಂದು ನಾನು ಆಯೋಧ್ಯೆಗೆ ಭೇಟಿ ನೀಡಿದಾಗ ಟೆಂಟ್ ನಲ್ಲಿ ಗೊಂಬೆಯಲ್ಲಿ ಅವುಗಳನ್ನೇ ಶ್ರೀರಾಮ ಮೂರ್ತಿ ಎಂದು ಹೇಳುತ್ತಿದ್ದರು. ಇದರಿಂದ ನನಗೆ ಯಾವುದೇ ರೀತಿಯಾದಂತಹ ವೈಬ್ರೇಶನ್ ಆಗಲಿಲ್ಲ ಎಂದು ತಿಳಿಸಿದರು.
ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರೆ ಅಲ್ಲಿ. ಇನ್ನೊಂದು ಐದಾರು ತಿಂಗಳು ಕಳೀಲಿ ಏನೇನ್ ಬರ್ತವೆ, ಏನೇನು ಅಂತೇಳಿ. ಯಾವತ್ತೂ ಕೂಡ ಶ್ರೀರಾಮ ಎಲ್ಲಾ ಜನರನ್ನ ಆಶೀರ್ವದಿಸುವ ದೇವರು. ಅದಕ್ಕೋಸ್ಕರ ರಾಮರಾಜ್ಯದ ಕಲ್ಪನೆ ಬಂದಿದ್ದು ಎಂದು ತಿಳಿಸಿದ್ದಾರೆ.
ಈಗ ಅದು ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ. ಅದು ಏನಾಗುತ್ತೆ ಅಂತಾ. ನಮ್ಮೂರಲ್ಲಿ ನೂರಾರು ವರ್ಷ ಇತಿಹಾಸ ಇರುವಂತಹ, ಪಾವಿತ್ರ್ಯವಾಗಿರುವ ಶ್ರೀರಾಮನ ದೇವಸ್ಥಾನಗಳಿವೆ. ಈಗ ಅದನ್ನ ಬಿಟ್ಟು ಇವರು ಚುನಾವಣೆಗೋಸ್ಕರ ದೇವಸ್ಥಾನಗಳನ್ನ ಕಟ್ಟಿ, ಜನರಿಗೆ ಮೋಸ ಮಾಡೋ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.