ಬೆಂಗಳೂರು: ರಾಜ್ಯ ಸರ್ಕಾರವು ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮೇಲೆ ಹಿಂದಿನ ಪ್ರಕರಣ ರೀ ಓಪನ್ ಮಾಡಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಕಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸೇಡಿನ ರಾಜಕೀಯ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ ಎನ್‌ಡಿಎ ಜತೆ ಕೈ ಜೋಡಿಸಲಾಗಿದ್ದು, ಇದರ ಬಗ್ಗೆ ಸಂಶಯ ಬೇಡ. ಕರಸೇವಕರ ಮೇಲಿನ ಪ್ರಕರಣ ಮರು ತನಿಖೆ ಮಾಡಿದ್ದು ಸೇಡಿನ ರಾಜಕೀಯ. ಮೈತ್ರಿ ಇರುವವರೆಗೆ ಸೇಡಿನ ರಾಜಕೀಯ ಮಾಡಿದರೆ ನಾವು ದನಿ ಎತ್ತಲಿದ್ದೇವೆ. ಇಂತಹ ಸಮಯದಲ್ಲಿ ನಾವು ಮಾತನಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಂತ್ಯ ಕಾಣಲಿದೆ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ನಾಯಕತ್ವದಲ್ಲಿ ಕಾಂಗ್ರೆಸ್ ಅಂತ್ಯ ಕಾಣಲಿದೆ. 60 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನಾವು ಅವರನ್ನು ನಾವು ಸೋಲಿಸಿಯೇ ಸೋಲಿಸುತ್ತೇವೆ. ಎನ್‌ಡಿಎ ಸೋಲಿಸಿ ರಾಜ್ಯದಲ್ಲಿ 20 ಸೀಟು ಗೆಲ್ಲುತ್ತೇವೆ ಅಹಂನಿಂದ ಹೇಳುತ್ತಿದ್ದಾರೆ. 20 ಸೀಟು ಗೆಲ್ಲೋದು ಎಂದರೆ ಕನಸು ಮಾತ್ರ ಎಂದು ಹೇಳಿದರು.