ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನವೆಂಬರ್ ನಲ್ಲಿ ಬಹುದೊಡ್ಡ ಕ್ರಾಂತಿ ಆಗಲಿದೆ ಎಂದು ಕೆಲವು ವಿಪಕ್ಷ ನಾಯಕರು ಹಾಗೂ ಇನ್ನೂ ಕೆಲವರು ಕಾಂಗ್ರೆಸ್ ಪಕ್ಷದ ನಾಯಕರೇ ಹೇಳಿಕೆ ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು ನವೆಂಬರ್ ನಲ್ಲಿ ಕ್ರಾಂತಿ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಬಿಜೆಪಿಯಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ರಾಜ್ಯದ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನವೆಂಬರ್ ಕ್ರಾಂತಿಯ ಬಗ್ಗೆ ನಾವು ಮಾತನಾಡಲ್ಲ. ನಾನು ಈ ಬಗ್ಗೆ ಮಾತನಾಡುವುದಿಲ್ಲ ಆದರೆ ಕಾದು ನೋಡೋಣ ಬಿಜೆಪಿಯಲ್ಲಿ ಯಾವುದೇ ಕ್ರಾಂತಿ ಆಗಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುತ್ತಾರೆ. ಕಾರ್ಯಕರ್ತರು ಕೂಡ ಅವರೇ ಮುಂದುವರಿಯಬೇಕೆಂದು ಬಯಸಿದ್ದಾರೆ. ಬಿ.ವೈ ವಿಜಯೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದರು.
ಇನ್ನು ದೆಹಲಿಯ ಕೆಂಪು ಕೋಟೆಯ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹಳ ವ್ಯವಸ್ಥಿತ ಪಿತೂರಿಯಿಂದ ಕಾರು ಸ್ಪೋಟಿಸಲಾಗಿದೆ. ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪಿಎಂ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ದೊಡ್ಡ ಅನಾಹುತ ಆಗುವುದನ್ನು ಪೊಲೀಸರು ತಡೆದಿದ್ದಾರೆ. ಘಟನೆಗೆ ಕಾರಣವಾದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ.
ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಾಧನೆಯ ಫಲಿತಾಂಶವಾಗಿದೆ. ಸ್ಪೋಟ ಕೇಸ್ನಲ್ಲಿ ಭಾಗಿಯಾದವರು ವೈದ್ಯರು ಎಂಬುವುದು ಆತಂಕಕಾರಿ. ವೈದ್ಯರೇ ಈ ಪಿತೂರಿಯಲ್ಲಿ ಪಾಲ್ಗೊಂಡಿರುವುದನ್ನು ನಾನು ಖಂಡಿಸುತ್ತೇನೆ. ಎನ್ಐಎ ತನಿಖೆಯ ನಂತರ ಇನ್ನು ಹೆಚ್ಚು ಸಂಗತಿ ಹೊರಬೀಳಲಿದೆ ಎಂದು ತಿಳಿಸಿದರು.








