ಕೊಪ್ಪಳ : ಸಚಿವ ಜಮೀರ್ ಅಹ್ಮದ್ ಖಾನ್ ನವೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ. ಹೊಸವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದು, ಇನ್ನು ವಿಪಕ್ಷ ನಾಯಕರು ನವೆಂಬರ್ ನಲ್ಲಿ ಕ್ರಾಂತಿ ಆಗಲಿದ್ದು ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದಲ್ಲಿ ಮಾಧ್ಯಮಗಳು ನವೆಂಬರ್ ನಲ್ಲಿ ಕ್ರಾಂತಿಯಾಗಲಿದೆಯಾ ಎಂದು ಪ್ರಶ್ನಿಸಿದಾಗ, ನವೆಂಬರ್ನಲ್ಲಿ ಯಾವ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ ಎಂದು ತಿಳಿಸಿದರು. ಇನ್ನು ಸಮೀಕ್ಷೆಯ ಹಿಂದೆ ಯಾರನ್ನೂ ತುಳಿಯುವ ಪ್ರಶ್ನೆ ಇಲ್ಲ. ಸಮಸಮಾಜ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಉದ್ದೇಶ. ಬದಲಾವಣೆ ಬೇಡ ಎನ್ನುವವರು ಸಮೀಕ್ಷೆ ವಿರೋಧಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮೀಕ್ಷೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಹೇಳಿಕೆಗೆ ಪ್ರತ್ರಿಕ್ರಿಯಿಸಿ, ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತದೆ, ಆಗ ಅದನ್ನು ವಿರೋಧ ಮಾಡುತ್ತಾರಾ? ಇದನ್ನು ನೀವು ಅವರಿಗೆ ಕೇಳಿದ್ದೀರಾ? ಎಂದು ಮಾಧ್ಯಮದವರ ಮೇಲೆ ಗರಂ ಆದರು. ಇನ್ನು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ನನ್ನ ನಿಲುವೇನೂ ಇಲ್ಲ. ಈ ವಿಚಾರವಾಗಿ ಯಾವ ಮುನ್ನೆಲೆಯೂ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲ ವಿರಕ್ತ ಸ್ವಾಮೀಜಿಗಳು ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.