ವಿಧಾನಸಭೆ : ಮರ ಕಡಿತಲೆಯನ್ನು ಒಳಗೊಂಡ ಯಾವುದೇ ರಸ್ತೆ ಯೋಜನೆಯಲ್ಲಿ ಕಡಿಯುವ ಒಂದು ಮರದ ಬದಲಿಗೆ 10 ಪಟ್ಟು ಸಸಿ ನೆಡಲು ವಿಧಿಸುವ ಶುಲ್ಕದ ಮೊದ ಪ್ರತಿ ಸಸಿಗೆ 411.27 ಆಗಿದ್ದು, ಇದನ್ನು ಉಪಯೋಗಿ ಸಂಸ್ಥೆ ಪಾವತಿಸಬೇಕಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ಸ್ಪಷ್ಟಪಡಿಸಿದ್ದಾರೆ.
ಸದಸ್ಯ ತಮ್ಮಯ್ಯ ಎಚ್.ಡಿ. ಅವರು ರಾ.ಹೆ.373 ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಶುಲ್ಕ ವಿನಾಯಿತಿ ನೀಡುವ ಕುರಿತಂತೆ ಗಮನ ಸೆಳೆದ ಪ್ರಸ್ತಾಪಕ್ಕೆ, ಉತ್ತರಿಸಿದ ಸಚಿವರು, ಬೆಳೆದ ಮರಗಳನ್ನು ಕಡಿಯುವುದನ್ನು ಒಳಗೊಂಡ ರಸ್ತೆ ಯೋಜನೆಗಳ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಎಚ್.ಎ.ಐ.)ಗೆ ಪ್ರತಿ ಕಿ.ಮೀ.ಗೆ 9.06 ಲಕ್ಷ ಶುಲ್ಕ ವಿಧಿಸಲಾಗಿರುತ್ತದೆ. ಆದರೆ ಎನ್.ಎಚ್.ಎ.ಐ.ನ ವಿಸ್ತೃತ ಯೋಜನಾ ವರದಿಯಲ್ಲಿ ಈ 9 ಲಕ್ಷ ಸೇರಿಸಿ, ಗುತ್ತಿಗೆದಾರರ ಕಡೆಯಿಂದಲೇ ಸಸಿ ನೆಡಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಎನ್.ಎಚ್.ಎ.ಐ.ಗೆ ಈಗ ನೀಡಿರುವ ಈ ವಿನಾಯಿತಿಯ ಪರಾಮರ್ಶೆ ಮಾಡಲಾಗುತ್ತಿದ್ದು, ಅವರು ರಸ್ತೆಯ ಬದಿಯಲ್ಲಿ ಗುತ್ತಿಗೆದಾರರಿಂದ ಸಸಿ ನೆಡಿಸದಿದ್ದರೆ, ಈಗ ನೀಡಿರುವ ಅನುಮತಿ ಹಿಂಪಡೆಯುತ್ತೇವೆ ಎಂದು ಸದನಕ್ಕೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗಗಳು, ರಾಜ್ಯ ಹೆದ್ದಾರಿ ವಿಭಾಗಗಳು, ರಾಜ್ಯ ಲೋಕೋಪಯೋಗಿ ಇಲಾಖೆ, ಪಿಆರ್.ಇ.ಡಿ., ಕೆಶಿಪ್, ಕೆ.ಆರ್.ಡಿ.ಸಿ.ಎಲ್ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ಕೈಗೊಳ್ಳಲಾಗುವ ರಸ್ತೆ ಯೋಜನೆಗಳಿಗೆ ಈ ವಿನಾಯಿತಿ ಆದೇಶ ಅನ್ವಯಿಸುವುದಿಲ್ಲ ಎಂದೂ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಇಲ್ಲಿದೆ ಲೀಸ್ಟ್








