ಬೆಂಗಳೂರು : “ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುವಂತೆ ಒತ್ತಡ ಹೆಚ್ಚಿದೆ. ಎಐಸಿಸಿ ಅಧ್ಯಕ್ಷರ ಹಾಗೂ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು “ನಾನು ಅಭ್ಯರ್ಥಿಗಿಂತ ಕಾರ್ಯಕರ್ತನಾಗಿ ಕೆಲಸ ಮಾಡುವುದರಲ್ಲಿ ಹೆಚ್ಚು ಖುಷಿ ಕಾಣುತ್ತೇನೆ. ಪಕ್ಷವು ಎರಡು, ಮೂರು ದಿನಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಪಕ್ಷದ ವರಿಷ್ಠರೆಲ್ಲ ಬದ್ಧವಾಗಿದ್ದೇವೆ” ಎಂದು ಹೇಳಿದರು.
“ಚನ್ನಪಟ್ಟಣ ತಾಲೂಕು ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿಯೂ ಉಪಚುನಾವಣೆ ಅಭ್ಯರ್ಥಿಯ ವಿಚಾರವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎನ್ನುವ ಮಾತು ಕೇಳಿ ಬಂದಿದೆ” ಎಂದರು.
ಅಧಿಕಾರಕ್ಕೋಸ್ಕರ ಚುನಾವಣೆಗೆ ನಿಲ್ಲುವುದಿಲ್ಲ
ಕಾಂಗ್ರೆಸ್ ಹೈಕಮಾಂಡ್ ನಿಮ್ಮನ್ನು ಅಭ್ಯರ್ಥಿ ಎಂದು ಸೂಚಿಸಿದರೆ ಎಂದು ಕೇಳಿದಾಗ “ನಾನು ಪಕ್ಷದ ಶಿಸ್ತಿನ ಸಿಪಾಯಿ. ನನ್ನ ಆಚಾರ ವಿಚಾರಗಳನ್ನು ಪಕ್ಷದ ಮುಖಂಡರ ಗಮನಕ್ಕೆ ತರುತ್ತೇನೆ. ನಾನು ಅಧಿಕಾರಕ್ಕೋಸ್ಕರ ಅದು ಚುನಾವಣೆಗೆ ನಿಲ್ಲಬೇಕು ಎನ್ನುವ ಉದ್ದೇಶ ಹೊಂದಿರುವವನಲ್ಲ. ಈ ಬಗ್ಗೆ ಪಕ್ಷದ ಮುಖಂಡರ ಬಳಿ ಚರ್ಚೆ ಮಾಡುತ್ತೇನೆ” ಎಂದು ಹೇಳಿದರು.
“ಚನ್ನಪಟ್ಟಣ ಅಭ್ಯರ್ಥಿಯ ಬಗ್ಗೆ ಇಂದು ಅಥವಾ ಸೋಮವಾರ ಮುಖ್ಯಮಂತ್ರಿಗಳು ಅಥವಾ ಎಐಸಿಸಿ ಅಧ್ಯಕ್ಷರು ಸಿಕ್ಕರೆ ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ.” ಎಂದು ಹೇಳಿದರು.
ನನಗೆ ಪಕ್ಷ ಅನಿವಾರ್ಯ
ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅನಿವಾರ್ಯತೆ ಇದೆಯೇ ಎನ್ನುವ ಬಗ್ಗೆ ಕೇಳಿದಾಗ ” ಪಕ್ಷಕ್ಕೆ ನಾನು ಅನಿವಾರ್ಯವಲ್ಲ. ನನಗೆ ಪಕ್ಷ ಅನಿವಾರ್ಯ” ಎಂದು ಹೇಳಿದರು.
ಕಾರ್ಯಕರ್ತರು ಪಕ್ಷಕ್ಕೆ ನೀವೇ ಅನಿವಾರ್ಯ ಎಂದು ಹೇಳುತ್ತಿರುವ ಬಗ್ಗೆ ಕೇಳಿದಾಗ “ಕಾರ್ಯಕರ್ತರ ಅಭಿಪ್ರಾಯಗಳಿಗೆ ಗೌರವವಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ, ನನಗಾಗಿ ಹಗಲು ರಾತ್ರಿ ದುಡಿದಿದ್ದಾರೆ. ಈ ವೇಳೆ ನಾನು ನಿಮ್ಮ ಜೊತೆ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆ ಹಗಲು ರಾತ್ರಿ ದುಡಿಯುತ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ” ಎಂದರು.
ತೀರ್ಮಾನಕ್ಕೆ ಶುಕ್ರವಾರದ ತನಕ ಸಮಯವಿದೆ
“ನಮ್ಮ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿದ್ದಾರೆ. ಶುಕ್ರವಾರದ ತನಕ ಸಮಯವಿದೆ. ಇನ್ನೂ ಐದು ದಿನಗಳು ಸಮಯವಿದ್ದು ನಮ್ಮ ತೀರ್ಮಾನವನ್ನು ತಿಳಿಸುತ್ತೇವೆ. ಬಿಜೆಪಿ, ಜೆಡಿಎಸ್ ಅವರು ಅವರ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕು. ಅಲ್ಲಿಯವರೆಗೂ ಕಾಯೋಣ. ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುವ ಕೆಲಸ ಮಾಡುತ್ತೇವೆ” ಎಂದರು.
ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿನ್ನು ಘೋಷಣೆ ಮಾಡಿ ಚನ್ನಪಟ್ಟಣವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ ಎನ್ನುವ ಬಗ್ಗೆ ಕೇಳಿದಾಗ ” ಬಿಜೆಪಿಯವರು ಒಂದು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಅವರೇ ತಿಳಿಸಬೇಕು. ಇದು ಆಯಾಯ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು” ಎಂದರು.
ಜೆಡಿಎಸ್ ಚಿನ್ಹೆ ಅಡಿ ಯೋಗೇಶ್ವರ್ ಅವರು ಸ್ಪರ್ಧಿಸಲು ಒಪ್ಪುತ್ತಿಲ್ಲ ಎನ್ನುವ ಬಗ್ಗೆ ಕೇಳಿದಾಗ ” ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಅವರನ್ನೇ ಕೇಳಬೇಕು. ಇದು ಅವರ ಆಂತರಿಕ ವಿಚಾರ” ಎಂದರು.
“ಸಂಡೂರು ಹಾಗೂ ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಮೈತ್ರಿ ಧರ್ಮದ ಪ್ರಕಾರ ಚನ್ನಪಟ್ಟಣವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರಬಹುದು ಎನ್ನುವುದು ನನ್ನ ಅನಿಸಿಕೆ. ಅಂತಿಮ ತೀರ್ಮಾನ ಅವರಿಗೆ ಸಂಬಂಧಪಟ್ಟಿದ್ದೆ ಹೊರತು ನಮಗಲ್ಲ” ಎಂದರು.
ಎದುರಾಳಿ ಯಾರೇ ಆದರೂ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆಯೇ ಎಂದು ಕೇಳಿದಾಗ “ನಮ್ಮ ಪಕ್ಷ ಮುಕ್ತ ಮನಸ್ಸಿನಿಂದ ಕೆಲಸ ಮಾಡಿದೆ. ಅನೇಕರು ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಈಗಲೂ ಪಕ್ಷಕ್ಕೆ ಬರುವವರಿಗೆ ಮಾಧ್ಯಮದ ಮುಖಾಂತರ ಮುಕ್ತ ಆಹ್ವಾನವನ್ನು ನೀಡುತ್ತೇವೆ” ಎಂದರು.
ಕುಮಾರಸ್ವಾಮಿ ಅವರದ್ದು ಮನರಂಜನೆಯುತ ಮಾತುಗಳು
ನಿಖಿಲ್ ಅವರನ್ನು ಕಣಕ್ಕೆ ಇಳಿಸಲು ಕುಮಾರಸ್ವಾಮಿ ಅವರು ಹಿಂದೇಟು ಹಾಕಿದ್ದಾರೆಯೇ ಎಂದು ಪ್ರಶ್ನಿಸಿದಾಗ “ಅವರ ಪಕ್ಷದ ತೀರ್ಮಾನವನ್ನು ಅವರಿಗೆ ಕೇಳಬೇಕು. ಕುಮಾರಸ್ವಾಮಿಯವರು ಬೆಳಿಗ್ಗೆಯೊಂದು, ಸಂಜೆಯೊಂದು ಮಾತನಾಡುತ್ತಿರುತ್ತಾರೆ. ಇವರ ಮಾತುಗಳನ್ನು ಜನರು ಮನರಂಜನೆ ಅಂತ ತಿಳಿದುಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಮಾತುಗಳು ಎಂದೂ ಗಂಭೀರವಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಬಯ್ಯುವಾಗ ಮಾತ್ರ ಗಂಭೀರವಾಗಿರುತ್ತಾರೆ” ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದಿಲ್ಲ ಎನ್ನುವ ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಕೇಳಿದಾಗ ” ಅವರು ಸಹ 5 ವರ್ಷ ಕೇಂದ್ರ ಮಂತ್ರಿಯಾಗಿ ಮುಂದುವರಿಯುವುದಿಲ್ಲ. 6 ತಿಂಗಳು ಅಥವಾ 1 ವರ್ಷಕ್ಕೆ ಮನೆಗೆ ಹೋಗುತ್ತಾರೆ” ಎಂದಾಗ ಯಾವ ಕಾರಣಕ್ಕೆ ಎಂದು ಮರು ಪ್ರಶ್ನಿಸಿದಾಗ ” ಅವರು ಯಾವ ಕಾರಣದಲ್ಲಿ ಹೀಗೆ ಹೇಳಿದರು ಎಂದು ಅವರನ್ನೇ ಕೇಳಿ. ನಮ್ಮ ಸರ್ಕಾರ ಇರುವುದಿಲ್ಲ ಎಂದ ಮೇಲೆ ಅವರ ಸರ್ಕಾರವು ಇರುವುದಿಲ್ಲ, ಅವರೂ ಇರುವುದಿಲ್ಲ” ಎಂದರು.
ಡಿ.ಕೆ.ಸುರೇಶ್ ಹೆಸರು ಮುನ್ನಲೆಗೆ ಬಂದ ತಕ್ಷಣ ಕುಮಾರಸ್ವಾಮಿ ಅವರು ಹಿಂದೇಟು ಹಾಕಿದ್ದಾರೆ ಎಂದಾಗ “ಕಾದು ನೋಡೋಣ” ಎಂದು ಚುಟುಕಾಗಿ ಉತ್ತರಿಸಿದರು.
ಸುದೀಪ್ ಅವರ ಮಾತೃ ವಿಯೋಗಕ್ಕೆ ಸಂತಾಪ
“ಸುದೀಪ್ ಅವರು ಭಾರತೀಯ ಚಿತ್ರರಂಗದಲ್ಲಿ ಹೆಜ್ಜೆ ಗುರುತನ್ನು ಮೂಡಿಸಲು ಅವರ ತಾಯಿಯವರ ಪ್ರೀತಿ-ವಿಶ್ವಾಸ ಪ್ರೋತ್ಸಾಹವೇ ಕಾರಣ. ಅವರ ತಾಯಿಯವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕುಟುಂಬಕ್ಕೆ ಹಾಗೂ ಸುದೀಪ್ ಅವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಂತಾಪ ಸೂಚಿಸಿದರು.
IPL 2025ರ ಮೆಗಾ ಹರಾಜಿಗೆ ಮುಂಚಿತವಾಗಿ CSK ಐವರು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ: ವರದಿ | IPL 2025
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ