ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 393 ಹುಲಿಗಳಿದ್ದಾವೆ ಎಂಬುದಾಗಿ ಕರ್ನಾಟಕ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳ ಸಮೀಕ್ಷೆ- 2024ರ ವರದಿಯಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಇವರ ಮಾರ್ಗಸೂಚಿಗಳ ಪ್ರಕಾರ, ಅಖಿಲ ಭಾರತ ಹುಲಿ ಗಣತಿಯ (AITE) ಭಾಗವಾಗಿ, ಎಲ್ಲಾ ರಾಜ್ಯಗಳ ಹುಲಿ ವಾಸಸ್ಥಾನ ಪ್ರದೇಶಗಳಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಹುಲಿ, ಆನೆ, ಇತರೆ ಬೇಟೆ ಹಾಗೂ ಸಸ್ಯಾಹಾರಿ ಪ್ರಾಣಿಗಳ ಗಣತಿಯನ್ನು ನಡೆಸಲಾಗುತ್ತದೆ. ದೇಶದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ಮತ್ತು ಸಸ್ಯಾಹಾರಿ ಪ್ರಾಣಿಗಳ ವಾರ್ಷಿಕ ಮೇಲ್ವಿಚಾರಣೆಯ ಭಾಗವಾಗಿ, NTCA ಪ್ರತಿ ವರ್ಷ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ Phase IV ಸಮೀಕ್ಷೆಗಳನ್ನು ನಡೆಸಲು ಸಲಹೆ ನೀಡಿದೆ.
ಹುಲಿ ಸಂರಕ್ಷಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿರುವ ಕರ್ನಾಟಕ, ಮಾರ್ಗಸೂಚಿಗಳನ್ನು ನಿಷ್ಠೆಯಿಂದ ಅನುಸರಿಸಿ 2015ರಿಂದ ಈ ಸಮೀಕ್ಷೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. 2023ರ ನವೆಂಬರ್‌ನಿಂದ 2024ರ ಫೆಬ್ರವರಿಯವರೆಗೆ ಕರ್ನಾಟಕ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ – ನಾಗರಹೊಳೆ, ಬಂಡೀಪುರ, ಭದ್ರ, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ (BRT) ಮತ್ತು ಕಾಳಿ (ದಾಂಡೇಲಿ-ಅಂಶಿ) ಪ್ರದೇಶಗಳಲ್ಲಿ ಈ Phase IV ಸಮೀಕ್ಷೆಗಳು ಕೈಗೊಳ್ಳಲಾಯಿತು
Phase IV ಸಮೀಕ್ಷೆಗಳು ಮುಖ್ಯವಾಗಿ ಕ್ಯಾಮೆರಾ (Camera Trap) ಸಮೀಕ್ಷೆಯನ್ನು ಒಳಗೊಂಡಿದ್ದು, ಇದು ಹುಲಿ ಹಾಗೂ ಇತರೆ ಬೇಟೆ ಪ್ರಾಣಿಗಳ ಸಂಖ್ಯೆ ಅಂದಾಜಿಗೆ ಉಪಯೋಗಿಸಲಾಗುತ್ತದೆ. ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಅಂದಾಜು ಮಾಡಲು ಲೈನ್ ಟ್ರಾನ್ಸೆಕ್ಟ್ (Line Transect) ಸಮೀಕ್ಷೆ ಬಳಸಲಾಗುತ್ತದೆ.
ಕರ್ನಾಟಕ ಅರಣ್ಯ ಇಲಾಖೆ, ಬೆಂಗಳೂರಿನ ಅರಣ್ಯ ಭವನದಲ್ಲಿ ಸ್ಥಾಪಿಸಿರುವ ಕರ್ನಾಟಕ ವನ್ಯಜೀವಿ ತಾಂತ್ರಿಕ ಘಟಕದ ಮೂಲಕ ಈ ಸಮೀಕ್ಷೆಯ ಮಾಹಿತಿಯನ್ನು ವಿಶ್ಲೇಷಿಸಿ, “ಕರ್ನಾಟಕ – 2024 ಹುಲಿಗಳ, ಸಸ್ಯಾಹಾರಿ ಹಾಗೂ ಇತರ ಪ್ರಾಣಿಗಳ ವಾರ್ಷಿಕ ವರದಿ” ಪ್ರಕಟಿಸಿದೆ.
ಒಟ್ಟು 2160 ಕ್ಯಾಮೆರಾ (Camera Trap) ಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದು, ಇದರಿಂದ ಸುಮಾರು 61 ಲಕ್ಷ ವನ್ಯಜೀವಿ ಚಿತ್ರಗಳು ಪಡೆದುಕೊಳ್ಳಲಾಯಿತು. ಹುಲಿ ಚಿತ್ರಗಳನ್ನು AI ಆಧಾರಿತ ತಂತ್ರಾಂಶದ ಮೂಲಕ ಪ್ರತ್ಯೇಕಿಸಲಾಗಿದ್ದು, ಪ್ರತಿ ಹುಲಿಯ ಎರಡು ಬದಿಯಲ್ಲಿನ (Flanks) ವಿಭಿನ್ನ ಪಟ್ಟೆ ವಿನ್ಯಾಸವನ್ನು ಗುರುತಿಸುವ ಮೂಲಕ ಪ್ರತ್ಯೇಕ ಹುಲಿಗಳನ್ನು ಗುರುತಿಸಲಾಗುತ್ತದೆ.
ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸ್ಥಿತಿಯ ಹೋಲಿಕೆ (2014 ರಿಂದ 2024):
Year | 2014 | 2018 | 2020 | 2022 | 2023 | 2024 |
Camera Points | 578 | 1776 | 1818 | 2179 | 2162 | 2160 |
Unique Tigers Captured | 226 | 332 | 365 | 376 | 384 | 373 |
Estimated Tiger Population | 261 | 472 | 403 | 417 | 408 | 393 |
2024ರ Phase IV ಸಮೀಕ್ಷೆಯ ಪ್ರಕಾರ, ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 393 ಹುಲಿಗಳ ಸಂಖ್ಯೆ ದಾಖಲಾಗಿದ್ದು, ಕೆಲವು ಹುಲಿಗಳು ಹುಲಿ ಸಂರಕ್ಷಿತ ಪ್ರದೇಶಗಳಿಂದ ಇತರ ಹುಲಿ ವಾಸಸ್ಥಾನ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದು ಗಮನಿಸಲಾಗಿದೆ. ಹುಲಿಗಳ ಚಲನಚಟುವಟಿಕೆಗಳ ಕಾರಣದಿಂದ, 5 ಹುಲಿ ಸಂರಕ್ಷಣೆ ಪ್ರದೇಶಗಳ ವಾರ್ಷಿಕ ಹುಲಿ ಸಮೀಕ್ಷೆ ಫಲಿತಾಂಶದಲ್ಲಿ ಏರುಪೇರುಗಳನ್ನು ಕಾಣಬಹುದು. ಆದರೆ, ಇಡೀ ರಾಜ್ಯದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸಮೀಕ್ಷೆ ಮಾಡಲಾಗುತ್ತಿದ್ದು, 5 ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಇತರ ಹುಲಿ ವಾಸಸ್ಥಾನಗಳಲ್ಲೂ ಹುಲಿಗಳ ಸಂಖ್ಯೆ ಕ್ರಮೇಣ ಏರಿಕೆಯಾಗಿದೆ. ಮುಂಬರುವ ಅಖಿಲ ಭಾರತ ಹುಲಿ ಗಣತಿ (AITE) – 2026, ಹುಲಿ ಸಂರಕ್ಷಿತ ಪ್ರದೇಶಗಳಿಂದ ವಲಸೆ ಹೋದ ಹುಲಿಗಳು ಇತರ ಸಂರಕ್ಷಿತ ಪ್ರದೇಶಗಳಲ್ಲಿ ಸ್ಥಾಪಿತವಾಗಿರುವ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡುವ ನಿರೀಕ್ಷೆಯಿದೆ.
ಕರ್ನಾಟಕ ಅರಣ್ಯ ಇಲಾಖೆ ತನ್ನ ರಾಜ್ಯಮಟ್ಟದ ವನ್ಯಜೀವಿ ತಾಂತ್ರಿಕ ಘಟಕ 2013ರಿಂದ ಪ್ರತಿ ವರ್ಷ ಕ್ಯಾಮೆರಾ ಸಮೀಕ್ಷೆಗಳಲ್ಲಿ ಸೆರೆಹಿಡಿದ ಹುಲಿಗಳ ಮಾಸ್ಟರ್ ಡೇಟಾಬೇಸ್ ಅನ್ನು ನಿರ್ವಹಿಸುತ್ತಿದ್ದು, ಇದು ಪ್ರತಿ ಹುಲಿಯ ವಿವರಗಳನ್ನು, ವಯಸ್ಸು, ಲಿಂಗ, ಕ್ಷೇತ್ರ ಪರಿಮಿತಿ (Territory), ವಲಸೆ ಚಲನ-ವಲನಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಈ ಡೇಟಾಬೇಸ್ ಹುಲಿಗಳನ್ನು ಗುರುತಿಸಲು ಪ್ರಮುಖ ನಿರ್ವಹಣಾ ಉಪಕರಣವಾಗಿದ್ದು, ಮಾನವ-ಹುಲಿ ಸಂಘರ್ಷದಲ್ಲಿ ಭಾಗಿಯಾಗಿರುವ ಹುಲಿಗಳನ್ನು ಗುರುತಿಸುವುದು, ಗಾಯಗೊಂಡ ಅಥವಾ ಸಾವನ್ನಪ್ಪಿದ ಹುಲಿಗಳನ್ನು ಅವುಗಳ ಪಟ್ಟೆ ವಿನ್ಯಾಸಗಳನ್ನು ಹೊಂದಾಣಿಕೆ ಮಾಡುವ ಮೂಲಕ ಪತ್ತೆ ಹಚ್ಚುವುದು ಮುಂತಾದ ಕಾರ್ಯಗಳಿಗೆ ಸಹಾಯ ಮಾಡುತ್ತದೆ.
ರಾಜ್ಯದ ಜನತೆ ಗಮನಕ್ಕೆ: ಮಾ.31 ‘ಯಶಸ್ವಿನಿ ಯೋಜನೆ’ಯಡಿ ನೋಂದಣಿಗೆ ಕೊನೆ ದಿನ
ಜಾತಿಗಣತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ: ಮಾಜಿ ಸಚಿವ ಹೆಚ್.ಆಂಜನೇಯ ಸ್ವಾಗತ