ವಾರ್ಸಾ: ಸುಮಾರು ಒಂದು ವರ್ಷದ ಹಿಂದೆ ನಡೆದ ‘ಆಪರೇಷನ್ ಸಿಂದೂರ್’ ಕುರಿತು ಈಗ ಮಹತ್ವದ ವಿದೇಶಿ ವರದಿಯೊಂದು ಹೊರಬಿದ್ದಿದ್ದು, ಪಾಕಿಸ್ತಾನ ಹರಡಿದ್ದ ಎಲ್ಲಾ ಸುಳ್ಳು ಪ್ರೊಪಗಾಂಡಾಗಳನ್ನು ಬಯಲು ಮಾಡಿದೆ. ಯುದ್ಧದ ಸಮಯದಲ್ಲಿ ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಚೀನಾ ಮತ್ತು ಅಮೆರಿಕದ ನೆರವಿನೊಂದಿಗೆ ಪಾಕಿಸ್ತಾನ ಜಗತ್ತಿಗೆ ಸುಳ್ಳು ಹೇಳಿತ್ತು. ಆದರೆ, ವಾಸ್ತವದಲ್ಲಿ ಭಾರತವು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ವೈರಿ ಪಡೆಯನ್ನು ಧೂಳೀಪಟ ಮಾಡಿತ್ತು ಎಂಬ ಅಂಶ ಈಗ ಸಾಬೀತಾಗಿದೆ.
ಮ್ಯಾಡಿಸನ್ ಪಾಲಿಸಿ ಫೋರಂನ ಯುದ್ಧ ಅಧ್ಯಯನ ವಿಭಾಗದ ಅಧ್ಯಕ್ಷ ಜಾನ್ ಸ್ಪೆನ್ಸರ್, ವಿವಿಧ ಯುದ್ಧ ವಿಶ್ಲೇಷಣಾ ಸಂಸ್ಥೆಗಳ ವರದಿಗಳನ್ನು ಆಧರಿಸಿ ಭಾರತದ ಈ ಐತಿಹಾಸಿಕ ಯಶಸ್ಸನ್ನು ವಿವರಿಸಿದ್ದಾರೆ.
ಪಾಕಿಸ್ತಾನದ ಸುಳ್ಳಿನ ಕೋಟೆ ಕುಸಿದಿದ್ದು ಹೀಗೆ…
ಜಾನ್ ಸ್ಪೆನ್ಸರ್ ಅವರ ಪ್ರಕಾರ, ಮೇ 7, 2025 ರಂದು ಆಪರೇಷನ್ ಸಿಂದೂರ್ ಪ್ರಾರಂಭವಾದಾಗ, ಪಾಕಿಸ್ತಾನವು ಮಾಹಿತಿ ಯುದ್ಧದಲ್ಲಿ (Information Warfare) ತೊಡಗಿತ್ತು. ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತೀಯ ವಾಯುಸೇನೆಗೆ ಭಾರಿ ನಷ್ಟವಾಗಿದೆ ಎಂದು ಬಿಂಬಿಸಿತ್ತು. ಆದರೆ ಸ್ವಿಟ್ಜರ್ಲೆಂಡ್ನ ‘ಸೆಂಟರ್ ಡಿ ಹಿಸ್ಟೋಯಿರ್ ಎಟ್ ಡಿ ಪ್ರಾಸ್ಪೆಕ್ಟಿವ್ ಮಿಲಿಟೈರ್ಸ್’ ಜನವರಿ 15, 2026 ರಂದು ಬಿಡುಗಡೆ ಮಾಡಿದ ವರದಿಯು ಅಸಲಿ ಚಿತ್ರಣವನ್ನು ಬಿಚ್ಚಿಟ್ಟಿದೆ.
88 ಗಂಟೆಗಳ ವಾಯುದಾಳಿ ಮತ್ತು ಭಾರತದ ಪ್ರಾಬಲ್ಯ
ಮೇ 7 ರಿಂದ 10 ರವರೆಗೆ ನಡೆದ 88 ಗಂಟೆಗಳ ಭೀಕರ ವಾಯು ಸಂಘರ್ಷದಲ್ಲಿ ಆರಂಭದಲ್ಲಿ ಭಾರತವು ಒಂದು ರಫೇಲ್, ಒಂದು ಮಿರಾಜ್ 2000 ಮತ್ತು ಒಂದು ಮಿಗ್-29 ಯುಪಿಜಿ ವಿಮಾನಗಳನ್ನು ಕಳೆದುಕೊಂಡಿದ್ದು ನಿಜ. ಇದನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನ ತನಗೆ ಗೆಲುವಾಗಿದೆ ಎಂದು ಬೀಗುತ್ತಿತ್ತು. ಆದರೆ ಮೇ 10ರ ವೇಳೆಗೆ ಭಾರತೀಯ ವಾಯುಸೇನೆ (IAF) ಪಾಕಿಸ್ತಾನದ ಆಕಾಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿತ್ತು.
ಪಾಕ್ ರಕ್ಷಣಾ ವ್ಯವಸ್ಥೆ ಮೇಲೆ ‘ಹಾರ್ಪಿ’ ದಾಳಿ
ಭಾರತವು ಅತ್ಯಂತ ಯೋಜಿತವಾಗಿ ಪಾಕಿಸ್ತಾನದ ರೇಡಾರ್ ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಧ್ವಂಸಗೊಳಿಸಿತು:
ಮೇ 8: ಚುನಿಯಾನ್ ಮತ್ತು ಪಸ್ರೂರ್ನಲ್ಲಿನ ಮುನ್ನೆಚ್ಚರಿಕೆ ರೇಡಾರ್ಗಳು ಮತ್ತು HQ-9 ಕ್ಷಿಪಣಿ ಬ್ಯಾಟರಿಗಳ ಮೇಲೆ ಭಾರತ ದಾಳಿ ಮಾಡಿತು.
ಮೇ 9: ಇಸ್ರೇಲ್ ನಿರ್ಮಿತ ‘ಹಾರೋಪ್’ ಮತ್ತು ‘ಹಾರ್ಪಿ’ ಲೋಯಿಟರಿಂಗ್ ಮ್ಯೂನಿಷನ್ (ಆತ್ಮಾಹುತಿ ಡ್ರೋನ್) ಬಳಸಿ ಪಾಕಿಸ್ತಾನದ ರಕ್ಷಣಾ ಜಾಲವನ್ನು ಹೈಜಾಕ್ ಮಾಡಲಾಯಿತು.
S-400 ಅಬ್ಬರ: ಭಾರತದ S-400 ಕ್ಷಿಪಣಿ ವ್ಯವಸ್ಥೆಯು ಸುಮಾರು 300 ಕಿಮೀ ದೂರದಲ್ಲಿದ್ದ ಪಾಕಿಸ್ತಾನದ ಪ್ರಮುಖ ವಿಮಾನಗಳನ್ನು ಹೊಡೆದುರುಳಿಸಿತು. ಇದರಿಂದಾಗಿ ಪಾಕ್ ಪಡೆಯ F-16 ಮತ್ತು JF-17 ವಿಮಾನಗಳು ಹಾರಾಟ ನಡೆಸಲು ಹೆದರುವಂತಾಯಿತು.
ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ಭಾರತದ ಹಿಡಿತ
ಮೇ 10 ರಂದು ಬೆಳಗಿನ ಜಾವ 2:00 ರಿಂದ 5:00 ರ ಅವಧಿಯಲ್ಲಿ ಭಾರತವು ಬ್ರಹ್ಮೋಸ್, ಸ್ಕಾಲ್ಪ್-ಇಜಿ (SCALP-EG) ಮತ್ತು ರಾಂಪೇಜ್ ಕ್ಷಿಪಣಿಗಳ ಮೂಲಕ ಪಾಕಿಸ್ತಾನದಾದ್ಯಂತ ದಾಳಿ ನಡೆಸಿತು:
ನೂರ್ ಖಾನ್ ಏರ್ ಬೇಸ್: ಇಸ್ಲಾಮಾಬಾದ್ ಸಮೀಪದ ಈ ನೆಲೆ ಮತ್ತು ಕಮಾಂಡ್ ಸೆಂಟರ್ ಮೇಲೆ ಭಾರತ ದಾಳಿ ಮಾಡಿತು.
ಮುರೀದ್ ಏರ್ ಬೇಸ್: ಪಾಕಿಸ್ತಾನದ ಡ್ರೋನ್ ಪಡೆಯ ಮುಖ್ಯ ಕೇಂದ್ರವಾಗಿದ್ದ ಈ ನೆಲೆಯ ಹ್ಯಾಂಗರ್ಗಳನ್ನು ಧ್ವಂಸಗೊಳಿಸಲಾಯಿತು.
ರಹೀಮ್ ಯಾರ್ ಖಾನ್: ಇಲ್ಲಿನ ರನ್ ವೇ ಮತ್ತು ಡ್ರೋನ್ ಕಂಟ್ರೋಲ್ ಸೆಂಟರ್ ಅನ್ನು ಭಾರತೀಯ ಕ್ಷಿಪಣಿಗಳು ಪುಡಿಪುಡಿ ಮಾಡಿದವು.
ದಕ್ಷಿಣ ಭಾಗ: ಸುಕ್ಕೂರ್, ಸರ್ಗೋಧಾ, ಜಾಕೋಬಾಬಾದ್ ಮತ್ತು ಭೋಲಾರಿ ಏರ್ ಬೇಸ್ಗಳ ಮೇಲೂ ದಾಳಿ ನಡೆಸಿ ಪಾಕಿಸ್ತಾನದ ಕಾರ್ಯಾಚರಣಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕುಂಠಿತಗೊಳಿಸಲಾಯಿತು.








