ಕೆಎನ್ಎನ್ಸಿನಿಮಾಡೆಸ್ಕ್: ಹೊಸಬರೇ ಸೇರಿಕೊಂಡು ಸಿದ್ಧಪಡಿಸುತ್ತಿರುವ ರಣವ್ಯೂಹ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಚಿತ್ರಪ್ರೇಮಿಗಳ ಮಡಿಲು ಸೇರಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಯುವ ಸಿನಿಮೋತ್ಸಾಹಿಗಳಿಗೆ ಕನಸಿಗೆ ಸಾಥ್ ಕೊಟ್ಟು, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಮಜಾಭಾರತ ಸೀಸನ್-3ಯಲ್ಲಿ ಜ್ಯೂನಿಯರ್ ದರ್ಶನ್ ಎಂದೇ ಖ್ಯಾತಿ ಪಡೆದ ಅವಿನಾಶ್ ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಬಹುಭಾಷಾ ತಾರೆ ಬೆಂಗಳೂರಿನ ಯಶ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರಾಜುಮಂಜು, ಸ್ಮಿತಾ, ವಿಸ್ಮಿತ್, ಅಕ್ಷತ್, ಅವಿನ್, ರಾಜಪ್ರತೀಕ್, ಗಣೇಶ್, ಶ್ರೀಕಾಂತ್ರೆಡ್ಡಿ, ಆನಂದ್, ಜಿಮ್ರವಿ, ಚಿಣ್ಣರಾದ ಯುವರಾಜ್, ಪ್ರಜೋತ್, ಆಕರ್ಷ್, ಚೈತನ್ಯ, ಪೂರ್ವಿಕಾ ತಾರಾಗಣದಲ್ಲಿ ಇದ್ದಾರೆ.
ದೇಶದ ಅರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡುವ, ಬಹಿರಂಗವಾಗದ ಸಮಾಜ ವಿದ್ರೋಹಕ ಚಟುವಟಿಕೆಗಳ ಸುತ್ತ ಸಾಗುವ ಕಥೆಯನ್ನು ಬೆಂಗಳೂರು, ಉಡುಪಿ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶ್ರೀಶಿರಡಿ ಸಾಯಿ ಮೂವೀಸ್ ಲಾಂಛನಡಿ ವೇಣುಕುಮಾರ್ ಎಂ.ಜಿ ಬಂಡವಾಳ ಹೂಡಿದ್ದು, ಶ್ರೀಪತಿ ಪೂಜಾರಿ-ಶೃತಿ ಹರೀಶ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಎಸ್.ಎಸ್.ಶಂಕರ್ ನಾಗ್ ನಿರ್ದೇಶನದ ರಣವ್ಯೂಹ ಸಿನಿಮಾಗೆ ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ, ಕೃಷ್ಣನಾಯ್ಕರ್ ಛಾಯಾಗ್ರಹಣ, ಸತೀಶ್ ಬಾಬು ಹಿನ್ನಲೆ ಶಬ್ದ, ಪ್ರವೀಣ್ ರಾಜ್ ಸಂಕಲನ, ವಿನಯ್ ಕುಮಾರ್ ಕಥೆ ಸಿನಿಮಾಕ್ಕಿದೆ.