ತುಮಕೂರು: ಬರೀ ಸುಳ್ಳುಗಳನ್ನು ಹೇಳುತ್ತಾ, ಬೆಲೆ ಏರಿಕೆಯ ಮೂಲಕ ಬಡ, ಮಧ್ಯಮವರ್ಗದವರ ಬದುಕನ್ನು ದುಸ್ತರ ಮಾಡಿರುವ ಬಿಜೆಪಿಯನ್ನು ಜನರೇ ಬುಡ ಸಮೇತ ಕಿತ್ತು ಹಾಕುವ ಕಾಲ ದೂರವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಸಂಭ್ರಮದಲ್ಲಿ ತುಮಕೂರಿನಲ್ಲಿಂದು ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಹೆಚ್ಚಿಸಿ ಬಡ, ಮಧ್ಯಮ ವರ್ಗದವರ ನೆಮ್ಮದಿಗೆ ಕೊಳ್ಳಿ ಇಟ್ಟಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಯಶಸ್ವಿ ಅನುಷ್ಠಾನ ಮಾಡುವ ಮೂಲಕ 1 ಕೋಟಿಗೂ ಹೆಚ್ಚು ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆ ತಂದಿದ್ದು, 2028ರ ಚುನಾವಣೆಯಲ್ಲೂ ಜಯಭೇರಿ ಬಾರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿಗಳು ಅಸಮಾನತೆಯ ನಿವಾರಣೆಯ ನಿಟ್ಟಿನಲ್ಲಿ ಬಹುದೊಡ್ಡ ಶಕ್ತಿಯಾಗಿದೆ ಎಂದು ಈಶ್ವರ ಖಂಡ್ರೆ, ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಪಕ್ಷಗಳೇ ಇಂದು, ಗ್ಯಾರಂಟಿ ಹೈಜಾಕ್ ಮಾಡುತ್ತಿವೆ ಎಂದು ತಿಳಿಸಿದರು.
ಇಂದು ನಾವು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದ್ದು, ಪ್ರಕೃತಿ ವಿಕೋಪಗಳು ಹೆಚ್ಚುತ್ತಿವೆ. ಇದಕ್ಕೆ ವೃಕ್ಷ ಸಂರಕ್ಷಣೆ ಮತ್ತು ವೃಕ್ಷ ಸಂವರ್ಧನೆಯೊಂದೇ ಮಾರ್ಗವಾಗಿದ್ದು, ಅಕ್ರಮವಾಗಿ ಮರ ಕಡಿತಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ಮತ್ತು ಹಸಿರು ಹೊದಿಕೆ ಹೆಚ್ಚಳಕ್ಕೆ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ ಕಳೆದ 3 ವರ್ಷದಲ್ಲಿ ರಾಜ್ಯದಲ್ಲಿ 11 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ಇವುಗಳಲ್ಲಿ ಎಷ್ಟು ಬದುಕಿ ಉಳಿದಿವೆ ಎಂಬುದನ್ನು ಆಡಿಟ್ ಮಾಡಿಸಿ ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಪಾರದರ್ಶಕತೆಯನ್ನು ಕಾಪಾಡಲಾಗಿದೆ ಎಂದರು.
ಕಳೆದ ವರ್ಷದಲ್ಲಿ 15 ಸಾವಿರ ಎಕರೆಗೂ ಹೆಚ್ಚು ಪ್ರದೇಶವನ್ನು ಸೆಕ್ಷನ್ 17 ಮತ್ತು 33ರ ಅಡಿಯಲ್ಲಿ ಹೊಸದಾಗಿ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ. ಬೆಂಗಳೂರು ಮಹಾನಗರದಲ್ಲಿ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 250 ಎಕರೆ ಸೇರಿದಂತೆ ರಾಜ್ಯದಾದ್ಯಂತ 12200 ಎಕರೆ ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದರು.
50 ಸಾವಿರ ಕೋಟಿ ರೂ. ಬೆಲೆಬಾಳುವ ಅರಣ್ಯ ಭೂಮಿಯನ್ನು ಮರಳಿ ಪಡೆಯಲು ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು, ಶೇ.10ಕ್ಕಿಂತ ಕಡಿಮೆ ಹಸಿರು ಹೊದಿಕೆ ಇರುವ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಸಿರು ಹೊದಿಕೆ ಹೆಚ್ಚಿಸಲು 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಯೋಜನೆ ಆರಂಭಿಸಲಾಗಿದೆ ಎಂದು ವಿವರಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಮಾನವ-ಆನೆ ಸಂಘರ್ಷದಿಂದ ಹೆಚ್ಚಿನ ಸಾವು ನೋವು ಸಂಭವಿಸುತ್ತಿದ್ದು, ಜನರ ಅಮೂಲ್ಯ ಜೀವ ಮತ್ತು ಬೆಳೆ ಉಳಿಸಲು 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕಳೆದ 3 ವರ್ಷದಲ್ಲಿ 115.075 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 31.65 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜೊತೆಗೆ ಸೂಕ್ಷ್ಮ ಪ್ರದೇಶಗಳಲ್ಲಿನ ವನ್ಯಜೀವಿ -ಮಾನವ ಸಂಘರ್ಷ ತಗ್ಗಿಸಲು ಇನ್ನೂ 77 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಳೆದ ಮೂರು ವರ್ಷದಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ₹1,044 ರೂ. ನೀಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ದೇವಸ್ಥಾನಗಳ ಚಿನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಾ? ವದಂತಿಗಳಿಗೆ ಈ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ!
BREAKING : ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 50 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ : ಸಿಎಂ ಸಿದ್ದರಾಮಯ್ಯ








