ಗದಗ : ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಪ್ರಮುಖ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತು. ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡಿದೆ. ಇದೀಗ ಹೊಸ ಘೋಷಣೆಯೊಂದಿಗೆ ಇಡೀ ದೇಶವನ್ನು ದಿವಾಳಿ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇನ್ನೊಂದೆಡೆ ಸಂವಿಧಾನ ತೆಗೆದು ಹಾಕುತ್ತಾರೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ದೇಶದಲ್ಲಿ ಯಾವಾಗೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಆಗಲೇ ಸಂವಿಧಾನ ತಿದ್ದುಪಡಿಯಾಗಿದೆ ಎಂದು ಹೇಳಿದರು.
ಸಂವಿಧಾನಕ್ಕೆ ಹೆಚ್ಚು ಬಾರಿ ತಿದ್ದುಪಡಿ ತಂದಿದ್ದು ಯಾರು? ದೇಶದ ಜನತೆಯ ಮೇಲೆ ಎಮರ್ಜೆನ್ಸಿ ಹೇರಿದ್ದು ಯಾರು? ವ್ಯಕ್ತಿ, ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿದ್ದು, ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿದ್ದು ಯಾರು? ಎಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಉತ್ತರ ಒಂದೇ ಅದು ಕಾಂಗ್ರೆಸ್. ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ, ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಎಂದು ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿನ ವಿದ್ಯುತ್ ಉತ್ಪಾದನಾ ಮತ್ತು ನಿರ್ವಹಣಾ ಸಂಸ್ಥೆಗಳು ಸಾಕಷ್ಟು ನಷ್ಟದಲ್ಲಿವೆ. ₹26 ಸಾವಿರ ಕೋಟಿ ಸಾಲ ಹೊಂದಿದ್ದು, ಈ ಸಂಸ್ಥೆಗಳಿಗೆ ಯಾವುದೇ ಬ್ಯಾಂಕ್‌ನವರು ಸಾಲ ನೀಡುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಹಣವೇ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಸದ್ಯದಲ್ಲಿಯೇ ರಾಜ್ಯ ಅಂಧಕಾರದಲ್ಲಿ ಮುಳುಗುತ್ತದೆ ಎಂದರು.
ಕಳೆದ ಹಲವಾರು ತಿಂಗಳಿಂದ ನಾಲ್ಕೈದು ನೂರು ರುಪಾಯಿಗಳಿಗಿಂತಲೂ ಹೆಚ್ಚಿನ ಬಿಲ್‌ಗಳು ಬಡವರಿಗೆ ಬರುತ್ತಿವೆ. ಸರ್ಕಾರ ಉಚಿತ ವಿದ್ಯುತ್ ಎಂದು ಹೇಳಿ, ಬೇರೆ ಬೇರೆ ರೂಪದಲ್ಲಿ, ಹಿತ್ತಲ ಬಾಗಿಲಿನಿಂದ ಹಣ ವಸೂಲಿ ಮಾಡುತ್ತಿದೆ. ಇದು ರಾಜ್ಯ ಸರ್ಕಾರ ಜನರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.