ಬೆಂಗಳೂರು : ರಾಜ್ಯದಲ್ಲಿ ಮಳೆ ಬಾರದೆ ಇರುವುದರಿಂದ ರೈತರು ತೀವ್ರವಾದ ಸಂಕಷ್ಟವನ್ನು ಎದುರಿಸಿದ್ದು ಈವರೆಗೆ ರಾಜ್ಯ ಸರ್ಕಾರ ಸೂಕ್ತವಾದ ರೀತಿಯಲ್ಲಿ ರೈತರಿಗೆ ಪರಿಹಾರವನ್ನು ಒದಗಿಸಿಲ್ಲ. ಆದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತ ವಿರೋಧಿ ಸರ್ಕಾರವಿದೆ.ಎನ್ ಡಿ ಆರ್ ಎಫ್ ನಿಯಮ ಪ್ರಕಾರ ಈ ಹಿಂದೆ ನಮ್ಮ ಸರ್ಕಾರ ಪರಿಹಾರ ನೀಡಿತ್ತು.ಹೆಕ್ಟರ್ ಗೆ 26 ಸಾವಿರ ರೂಪಾಯಿ ಪರಿಹಾರ ನೀಡಿದ್ದೆವು.ಈಗಿನ ಸರ್ಕಾರ ಬರಿ 2 ಸಾವಿರ ನೀಡುವುದಾಗಿ ಹೇಳುತ್ತಿದೆ ಎಂದರು.
ಸರ್ಕಾರದ ಈ ನಡೆಯಿಂದ ರೈತರಿಗೆ ಮಾಡುತ್ತಿರುವ ಅಪಮಾನವಾಗಿದೆ. ಕಳೆದ ನಾಲ್ಕು ತಿಂಗಳಿಂದ ಸರ್ಕಾರ ರೈತರಿಗೆ ಬರ ಪರಿಹಾರ ನೀಡಿಲ್ಲ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ.ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಬರ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಇನ್ನೂ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್ ಗೆ ಜಾಮೀನು ವಿಚಾರಕ್ಕೆ ಸಂಬಂಧಸಿದಂತೆ ಮಾತನಾಡಿದ ಅವರು, ಶ್ರೀಕಾಂತ್ ಪೂಜಾರಿ ಗೆ ಜಾಮೀನು ಸಿಕ್ಕಿರುವುದನ್ನು ಸ್ವಾಗತ ಮಾಡುತ್ತೇನೆ ಇದು ರಾಮ ಭಕ್ತರಿಗೆ ಸಿಕ್ಕಿದ ಜಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಹಿಂದುಗಳು ಕರಸೇವಕರ ಮೇಲೆ ಕೇಸ್ ಹಾಕುವ ಪ್ರವರ್ತಿ ಆಗುತ್ತಿದೆ. ಮುಸ್ಲಿಮರ ಓಲೈಕೆಗಾಗಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ಹಿಂದೂ ಮುಸ್ಲಿಂ ನಡುವೆ ಭೇದ ಭಾವ ಮೂಡಿಸಿದ ಬ್ರಿಟಿಷರ ನಡೆಯಾಗಿದ್ದು, ಕಾಂಗ್ರೆಸ್ ಪಕ್ಷದ ಡಿ ಎನ್ ಎ ಅಲ್ಲೇ ಬ್ರಿಟಿಷರ ಗುಣ ಇದೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.