ಬೆಂಗಳೂರು : ರಾಜ್ಯಾದ್ಯಂತ ಮೇ 29ರಿಂದ ಶಾಲೆಗಳು ಆರಂಭವಾಗುತ್ತಿದ್ದು, ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕುರಿತ ವಾರ್ಷಿಕ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ 2024-25ನೆ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಶಾಲಾ ಶಿಕ್ಷಣ ಇಲಾಖೆಯು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
ಈ ನಡುವೆ ಕೇಂದ್ರವು ಶಾಲೆಗೆ ಸೇರಲು 6 ವರ್ಷ ಕಡ್ಡಾಯವಾಗಿರಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಇದರ ನಡುವೆಯೂ ಪ್ರಸಕ್ತ ವರ್ಷದ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಜೂ.1ಕ್ಕೆ ಆರು ವರ್ಷಗಳು ತುಂಬಿರಬೇಕು ಎಂಬ ನಿಯಮವನ್ನು ಸಡಿಲಿಸಿದ್ದು, ತಿದ್ದುಪಡಿಯನ್ನೇ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
ಇದಲ್ಲದೇ 2024-25ನೆ ಶೈಕ್ಷಣಿಕ ವರ್ಷದ ಮೊದಲನೇ ಅವಧಿಯು ಮೇ 29ರಿಂದ ಅ.2ರ ವರೆಗೆ ಇರಲಿದೆ. ಎರಡನೇಯ ಅವಧಿಯು ಅ.21ರಿಂದ 2025ರ ಎ.10ಡಿ ವರೆಗೆ ಇರಲಿದೆ. ಬೇಸಿಗೆ ರಜೆಯು ಎ.11ರಿಂದ ಮೇ 28ರ ವರೆಗೆ ಇರಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಸಾರ್ವತ್ರಿಕವಾಗಿ ಲಭ್ಯಪಡಿಸುವ ಸಲುವಾಗಿ ಇಲಾಖಾ ಅಂತರ್ಜಾಲ ತಾಣhttps://schooleducation.karnataka.gov.in ನಲ್ಲಿ ಪ್ರಕಟಿಸಲಾಗಿದೆ.