ಬೆಂಗಳೂರು: ನಿನ್ನೆ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣದ ಬದಲಾಗಿ 5 ಕೆಜಿ ಅಕ್ಕಿ ವಿತರಣೆ, ಅಧಿಕ ಬಡ್ಡಿ ನಿಷೇಧ ತಿದ್ದುಪಡಿ ಕಾಯ್ದೆ ಸೇರಿದಂತೆ 5 ಮಹತ್ವದ ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಮಗಾರಿಗಳ ಅಂದಾಜು ತಯಾರಿ ಸಮಿತಿ ರಚನೆ ಮಾಡಲಾಗಿತ್ತು. ಗುರುಪ್ರಸಾದ್ ಅನ್ನೋರ ನೇತೃತ್ವದಲ್ಲಿ ಈ ಸಮಿತಿ ರಚನೆ ಆಗಿತ್ತು. ಗುರುವಾರದ ಸಂಪುಟ ಸಭೆಯಲ್ಲಿ ಈ ವರದಿ ಪರಿಶೀಲಿಸಿ ಮುಂದುವರೆಯಲು ನಿರ್ಧರಿಸಲಾಗಿದೆ. ಡಿಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಚರ್ಚಿಸಿ ಮುಂದಿನ ಸಚಿವ ಸಂಪುಟಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
ಹುನಗುಂದದಲ್ಲಿ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆ ನಿರ್ಮಿಸಲು ಸಂಪುಟದ ಒಪ್ಪಿಗೆ ನೀಡಲಾಗಿದೆ. ಮೈಸೂರು ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಯೋಜನೆ ಅಡಿ 70 ಕೋಟಿ ವೆಚ್ಚದ ಸೀಡ್ ಫಂಡ್ ಮೀಸಲಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಆರಂಭಿಕ ಹಂತದ ಸ್ಟಾರ್ಟಪ್ ಗಳಿಗೆ ಇದರಿಂದ ಸಹಕಾರ ಆಗತ್ತೆ. ಇದಕ್ಕಾಗಿ ಈ ನಿಧಿ ಎತ್ತಿಡಲಾಗುತ್ತಿದೆ. ಇದು ನವೋಧ್ಯಮಗಳಿಗೆ ಬೆಂಬಲಿಸಲು ಮಾಡುತ್ತಿರುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಅಲ್ಪಸಂಖ್ಯಾತರ ಇಲಾಖೆ ಚಿಂತಾಮಣಿಯಲ್ಲಿನ ದರ್ಗಾ ಒಂದರ ಅಭಿವೃದ್ಧಿ ಗೆ 39 ಕೋಟಿಗಳ ಕ್ರಿಯಾಯೋಜನೆ ನೀಡಿತ್ತು. ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಚಿಂಚೋಳಿಯ ಪ್ರಜಾಸೌಧ ನಿರ್ಮಾಣದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಹಿಂದೆ 10 ಕೋಟಿ ಇತ್ತು. ಈಗ ಹೆಚ್ಚುವರಿ 91 ಕೋಟಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಗದಗದಲ್ಲಿನ ಪ್ರಜಾಸತ್ತಾತ್ಮಕ ಸೌಧ ಕಾರ್ಯಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.
5 ಸಾವಿರ ಸಂಖ್ಯೆ ಜಿಎನ್ ಎಸ್ ಎಸ್ ರೋವರ್ ಗಳ ಖರೀದಿಗೆ 175 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ. ಕಂದಾಯ ಇಲಾಖೆಯಲ್ಲಿನ ಆಧುನಿಕ ಸರ್ವೇ ಮಾಪಕ ಖರೀದಿಗಾಗಿ ಈ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಲು 22 ಕೋಟಿ ಮಂಜೂರು ಮಾಡಲಾಗಿದೆ. ಟೆಂಡರ್ ಮೂಲಕ ಕಟ್ಟಡ ಕಾಮಗಾರಿ ನಡೆಸಲು ಒಪ್ಪಿಗೆ ನೀಡಲಾಗಿದೆ. ಹಳೆಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಸಮಾಜಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ ಇದಾಗಿದೆ ಎಂದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ಸಭೆ ನಿರ್ಣಯ ಕೈಗೊಳ್ಳಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಾನ್ಸನ್ ಮಾರ್ಕೆಟ್, ದೊಮ್ಮಲೂರು, ಮಚಲಿಬೆಟ್ಟ, ಹಲಸೂರು ಸೇವಾ ಠಾಣೆಗಳ ಪ್ರದೇಶವಾರು ನೀರು ಸರಬರಾಜು ವ್ಯವಸ್ಥೆಗಳ ಆಧುನೀಕರಣ ಮಾಡಲಾಗುತ್ತಿದೆ. ಒಟ್ಟು 199.00 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.
ಇಂದಿನ ಕ್ಯಾಬಿನೆಟ್ ನಲ್ಲಿ ಐದು ಪ್ರಮುಖ ವಿಧೇಯಕಗಳ ಅನುಮೋದನೆ
1. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ – 2025 ಕ್ಕೆ ಅನುಮೋದನೆ
2. ಕರ್ನಾಟಕ ಅಧಿಕ ಬಡ್ಡಿ ನಿಷೇಧ (ತಿದ್ದುಪಡಿ) ವಿಧೇಯಕ – 2025
3. ಕರ್ನಾಟಕ ಗಿರಿವಿದಾರರ (ತಿದ್ದುಪಡಿ) ವಿಧೇಯಕ – 2025″
4. ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ, 2025
5. ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) ನಿಯಮಗಳು (ಸಾಮಾನ್ಯ) (ತಿದ್ದುಪಡಿ) 2024 ಸೇರಿದಂತೆ ಒಟ್ಟು ಐದು ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ.