ಬೆಂಗಳೂರು: ನೈಋತ್ಯ ರೈಲ್ವೆಯ ಮಹಾಪ್ರಬಂಧಕ ಮುಕುಲ್ ಸರಣ್ ಮಾಥುರ್ ಅವರು ಬೀರೂರು ಮತ್ತು ತಾಳಗುಪ್ಪ ನಡುವಿನ ಮಾರ್ಗದಲ್ಲಿ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿ ಮುಖ್ಯ ಸುರಕ್ಷತೆ ಹಾಗೂ ಕಾರ್ಯಚರಣೆ ಸಂಬಂಧಿತ ಅಂಶಗಳನ್ನು ಪರಿಶೀಲಿಸಿದರು. ಈ ತಪಾಸಣೆಯ ಉದ್ದೇಶ ನಿಲ್ದಾಣಗಳ ಪುನರಾಭಿವೃದ್ಧಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಪರಿಶೀಲಿಸುವುದಾಗಿದೆ.
ತಪಾಸಣೆಯ ಸಮಯದಲ್ಲಿ, ಶಿವಮೊಗ್ಗ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿಯನ್ನು ಪರಿಶೀಲಿಸಿದರು. ನಿಲ್ದಾಣದ ಸೌಂದರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ, ಮಾಥುರ್ ಅವರು ಹಳಿ ನಿರ್ವಹಣಾಕಾರರೊಂದಿಗೆ ಸಂವಹನ ನಡೆಸಿದರು, ದಿನನಿತ್ಯದ ಕೆಲಸಗಳಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಪರಿಷೀಲನಾ ವೇಳೆ ಕೋಟೆಗಂಗೂರು ಕೋಚಿಂಗ್ ಡಿಪೋಗೆ ಭೇಟಿ ನೀಡಿ, ವಿಸ್ತರಿಸಲಾಗುತ್ತಿರುವ ಕೋಚಿಂಗ್ ಮೂಲಸೌಕರ್ಯದ ಪ್ರಗತಿಯನ್ನು ಪರಿಶೀಲಿಸಿದರು. ನಂತರ ಅವರು ಅರಸಾಳು ನಿಲ್ದಾಣವನ್ನು ಪರಿಶೀಲಿಸಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಅರಸಾಳು ನಿಲ್ದಾಣದಲ್ಲಿರುವ ‘ಮಾಲ್ಗುಡಿ ಡೇಸ್’ ಮ್ಯೂಸಿಯಂಗೆ ಭೇಟಿ ನೀಡಿದ ಮಾಥುರ್ ಅವರು, ಆರ್.ಕೆ. ನಾರಾಯಣ್ ಅವರ ಕಾದಂಬರಿಯನ್ನು ಆಧರಿಸಿ ಶಂಕರ್ ನಾಗ್ ನಿರ್ದೇಶಿಸಿದ್ದ ಐಕ್ಯಪಾಠದ ಧಾರಾವಾಹಿಗೆ ನಮನ ಸಲ್ಲಿಸುತ್ತಲೇ, ಈ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು. ಕಾಲ್ಪನಿಕ ಮಾಲ್ಗುಡಿ ಪಟ್ಟಣದ ಮನೋಹರ ಸ್ಮೃತಿಗಳನ್ನು ಜೀವಂತವಾಗಿ ಉಳಿಸಿರುವ ಈ ಮ್ಯೂಸಿಯಂ, ಪ್ರಯಾಣಿಕರಲ್ಲಿ ವಿಶೇಷ ಆಕರ್ಷಣೆಯಾಗಿದೆ.
ತಾಳಗುಪ್ಪ ನಿಲ್ದಾಣದಲ್ಲಿ, ABSS ಅಡಿಯಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳ ಗುಣಮಟ್ಟ ಮತ್ತು ವೇಗವನ್ನು ಪರಿಶೀಲಿಸಿದರು. ಅಲ್ಲಿನ ಪಾಯಿಂಟ್‌ಮೆನ್‌ಗಳೊಂದಿಗೆ ಸಂವಾದ ನಡೆಸಿ, ಅವರ ಕೆಲಸದ ಪರಿಸ್ಥಿತಿಗಳ ಕುರಿತು ಚರ್ಚಿಸಿದರು ಮತ್ತು ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.
ಪರಿಶೀಲನೆಯ ಸಮಯದಲ್ಲಿ ಮಾಥುರ್ ಅವರೊಂದಿಗೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಮುಖ್ಯ ಎಂಜಿನಿಯರ್ (ನಿರ್ಮಾಣ) ಪ್ರದೀಪ್ ಪುರಿ ಮತ್ತು ಮೈಸೂರು ವಿಭಾಗದ ಇತರ ಹಿರಿಯ ಅಧಿಕಾರಿಗಳು ಇದ್ದರು.
UPSC ಪೂರ್ವಭಾವಿ, ಮುಖ್ಯ ಪರೀಕ್ಷೆಗೆ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ