ಬೆಂಗಳೂರು : 83 ವರ್ಷದ ಇಳಿ ವಯಸ್ಸಿನಲ್ಲೂ 55 ವರ್ಷದ ಚಿರಯುವಕ, ನಾಲಾಯಕ್ ರಾಹುಲಗಾಂಧಿ ಅವರೇ ನಮ್ಮ ನಾಯಕ ಎಂದು ಸಲಾಮು ಹೊಡೆದುಕೊಂಡು ಓಡಾಡುವ ದುಸ್ಥಿತಿ ನಿಮ್ಮ ತಂದೆ ಸನ್ಮಾನ್ಯ ಖರ್ಗೆ ಅವರಿಗೆ ಬರಬಾರದಿತ್ತು ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿರುವ ಅವರು, ತಮ್ಮ ಮಕ್ಕಳಿಗೆಲ್ಲಾ ಪ್ರಿಯದರ್ಶಿನಿ, ಪ್ರಿಯಾಂಕ, ರಾಹುಲ್ ಎಂದು ಹೆಸರಿಟ್ಟು ನಕಲಿ ಗಾಂಧಿ ಕುಟುಂಬಕ್ಕೆ ಎಷ್ಟು ನಿಷ್ಠರಾಗಿದ್ದರೂ ಕರ್ನಾಟಕದ ಅತ್ಯಂತ ಹಿರಿಯ ನಾಯಕರಾದ ನಿಮ್ಮ ತಂದೆಯವರಿಗೆ ಮುಖ್ಯಮಂತ್ರಿ ಸ್ಥಾನ ಇಲ್ಲ.
ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರು ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತಾ ಮೈಮರೆಯಬೇಡಿ, ಸಮಾಧಾನವೂ ಪಟ್ಟುಕೊಳ್ಳಬೇಡಿ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಾನು ಎಐಸಿಸಿ ಅಧ್ಯಕ್ಷ ಆಗುವುದಿಲ್ಲ ಎಂದು ನಕಲಿ ಗಾಂಧಿ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದಕ್ಕೆ ಅನಿವಾರ್ಯವಾಗಿ ನಿಮ್ಮ ತಂದೆಯವರನ್ನು ನಾಮಕಾವಸ್ತೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಒಲ್ಲದ ಮನಸ್ಸಿನಿಂದ ತಂದು ಕೂರಿಸಿದ್ದಾರೆ.
ಒಂದು ನೆನಪಿಟ್ಟುಕೊಳ್ಳಿ. ಏನೇ ಮಾಡಿದರೂ ನೀವು ಮತ್ತು ನಿಮ್ಮ ಕುಟುಂಬ, ನಕಲಿ ಗಾಂಧಿ ಕುಟುಂಬಕ್ಕಿಂತ, ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗಿಂತ ಕೆಳಗೇ ಇದ್ದೀರಿ, ಮುಂದೆಯೂ ಇರುತ್ತೀರಿ. ಒಂದು ವೇಳೆ ಕಾಂಗ್ರೆಸ್ ಪಕ್ಷ ಉಳಿದರೆ, ಬಹುಶಃ ಭವಿಷ್ಯದಲ್ಲೂ ತಾವು ಪ್ರಿಯಾಂಕಾಗಾಂಧಿ ಅವರ ಮಕ್ಕಳಿಗೆ ಸಲಾಮು ಹೊಡೆದುಕೊಂಡು ಜೇವನ ಸಾಗಿಸಬೇಕಾಗಬಹುದು.
ನಿಮಗೆ ಸಿಕ್ಕಿರುವ ಸಚಿವ ಸ್ಥಾನವೂ ನಿಮಗೆ ದೊರಕಿದ ಸಮ್ಮಾನವಲ್ಲ ಅಥವಾ ನಿಮ್ಮ ಪ್ರತಿಭೆಗೆ ಸಿಕ್ಕ ಅವಕಾಶವಲ್ಲ, ಅದು ನಿಮ್ಮ ತಂದೆಯವರನ್ನು ಸಮಾಧಾನ ಪಡಿಸುವ ಸಮಾಧಾನಕರ ಬಹುಮಾನ ಅಷ್ಟೇ.