ಬೆಂಗಳೂರು : ತನಿಖಾ ಸಂಸ್ಥೆಗಳು ತನಿಖೆ ನಡೆಸುವುದರ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ, ಹೊಸದಾಗಿ ತನಿಖೆ ಮಾಡುವುದು ಅಥವಾ ಬೇರೊಂದು ತನಿಖಾ ಸಂಸ್ಥೆಗೆ ವರ್ಗಾವಣೆ ಮಾಡುವ ಅಧಿಕಾರ ಸಾಂವಿಧಾನಿಕವಾಗಿ ರಚನೆಯಾಗಿರುವ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗೆ ಮಾತ್ರ ಇದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
CRPC ಸೆಕ್ಷನ್ 156(3) ಅಡಿಯಲ್ಲಿ ಮರು/ಮುಂದಿನ ತನಿಖೆಗಾಗಿ ಬೆಂಗಳೂರು 31ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅಲ್ಲದೆ, ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ಆದೇಶ ಬಿಎನ್ಎಸ್ಎಸ್ ಅನ್ನು ಅನುಸರಿಸಬೇಕೇ ಅಥವಾ ಸಿಆರ್ಪಿಸಿ ಸೆಕ್ಷನ್ನ್ನು ಅನುಸರಿಸಬೇಕೇ ಎಂಬ ಬಗ್ಗೆ ಅಸ್ಪಷ್ಟವಾಗಿದೆ.
ಪ್ರಕರಣದ ಮರು ತನಿಖೆ, ಹೊಸ ತನಿಖೆ ಅಥವಾ ತನಿಖೆಯನ್ನು ಯಾವುದೇ ಇತರ ಸಂಸ್ಥೆಗೆ ವರ್ಗಾಯಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳ ವಿಶೇಷ ಹಕ್ಕು ಆಗಿದೆ. ಹೀಗಾಗಿ, ಈ ಆದೇಶದಲ್ಲಿ ಮರು ಅಥವಾ ಹೆಚ್ಚುವರಿಯಾಗಿ ತನಿಖೆಯ ಪದಗಳ ಬಳಕೆ ಸರಿಯಾದುದ್ದಲ್ಲ. ಹೀಗಾಗಿ, ಪ್ರಕರಣವನ್ನು ಮರು ಪರಿಶೀಲಿಸಿ ಕಾನೂನಿಗೆ ಅನುಗುಣವಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ರವಾನೆ ಮಾಡಿದೆ.







