ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಳತ್ತಮಜಲು ನಲ್ಲಿ ಅಬ್ದುಲ್ ರಹಿಮಾನ್ ಅವರ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಅಹಿತಕರ ಘಟನೆ ನಡೆಯದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ರೀತಿಯ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಅಬ್ದುಲ್ ಅವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೂಬಸ್ತ ಮಾಡಲಾಗಿದೆ ಎಂದರು.
ಬಿಜೆಪಿ ಶವಗಳ ಮೇಲೆ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ ಸಚಿವರು, ಪ್ರಚೋದನಾಕಾರಿ ಭಾಷಣಗಳನ್ನ ಮಾಡಿ ಸಮಾಜದಲ್ಲಿ ಕೋಮು ದ್ವೇಷವನ್ನ ಮೂಡಿಸಲಾಗುತ್ತಿದೆ. ಹತ್ಯೆ ಮಾಡುವ ಕೊಲೆಗಡುಕರ ವಿಚಾರದಲ್ಲಿ ಧರ್ಮ, ಜಾತಿ ನೋಡುವ ಪ್ರಶ್ನೆಯೇ ಇಲ್ಲ. ಮಂಗಳೂರಿನಲ್ಲಿ ನಡೆದ ಹತ್ಯೆಗಳ ವಿಚಾರದಲ್ಲಿ ನಮ್ಮ ಸರ್ಕಾರ ನಿಸ್ಪಕ್ಷಪಾತವಾದ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಂಡಿದೆ. ಯಾವುದೇ ಭೇದ ಭಾವ ಮಾಡಿಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಿದ್ದರೂ, ಅವರ ಹೆಡಿಮುರಿ ಕಟ್ಟಿ, ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಅಮಾಯಕ ಅಶ್ರಫ್ ಹತ್ಯೆಮಾಡಿದವರನ್ನು ಹಿಡಿದು ಬಂಧಿಸಲಾಗಿದೆ. ರೌಡಿಶಿಟರ್ ಸುಹಾಸ್ ಶೆಟ್ಟಿ ಹತ್ಯೆ ಮಾಡಿದವರನ್ನೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದೀಗ ಅಬ್ದುಲ್ ಅವರ ಪ್ರಕರಣದಲ್ಲೂ ಆರೋಪಿಗಳನ್ನ ಹಿಡಿದು ತರುವಲ್ಲಿ ಪೊಲೀಸರು ಸಕ್ಷಮರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ವಿಶ್ವಾಸ ವ್ಯಕ್ತಪಡಿಸಿದರು..
ಕರಾವಳಿ ಭಾಗದಲ್ಲಿ ಈ ರೀತಿಯ ಪ್ರತಿಕಾರದ ಹತ್ಯೆಗಳನ್ನ ತಡೆಗಟ್ಟಲು ಕೋಮು ನಿಗ್ರಹ ದಳ ರಚಿಸಲಾಗುತ್ತಿದೆ. ಶೀಘ್ರದಲ್ಲಿಯೇ ಆ್ಯಂಟಿ ಕಮ್ಯುನಲ್ ಫೋರ್ಸ್ ತನ್ನ ಕಾರ್ಯ ಪ್ರಾರಂಭಿಸಲಿದೆ. ಕೋಮುವಾದದಿಂದ ಸಮಾಜಗಳಲ್ಲಿ ಮೂಡುತ್ತಿರುವ ಒಡುಕನ್ನು ಹೋಗಲಾಡಿಸಿ ಸೌಹಾರ್ದಯುತವಾದ ಸಹಬಾಳ್ವೆಯ ಶಾಂತಿಯುತ ಸಮಾಜವನ್ನ ನಿರ್ಮಾಣಕ್ಕೆ ಎಲ್ಲರು ಮುಂದಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.