ಬೆಂಗಳೂರು: ಮಾಜಿ ಪ್ರಧಾನಿ ದೇವೆಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪೆನ್ ಡ್ರೈವ್ ಸಂಚಿನಲ್ಲಿ ನೇರವಾಗಿ ಭಾಗಿಯಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಆಡಿಯೋ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಪಾತ್ರ ಸ್ಪಷ್ಟವಾಗಿದೆ. ಅವರು ರಾಜೀನಾಮೆ ಕೊಡಲೇಬೇಕು. ಇಲ್ಲವಾದರೆ ಸಿಎಂ ಅವರೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಪೆನ್ ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಗೌಡ ಮೊತ್ತ ಮೊದಲು ಈ ವಿಡಿಯೋಗಳನ್ನು ತಂದು ಕೊಟ್ಟಿದ್ದೆ ಡಿಕೆಶಿಗೆ. ಆ ಸಂದರ್ಭದಲ್ಲಿ ಅವರ ಪಕ್ಷದ ಹಾಸನದ ಅಭ್ಯರ್ಥಿಯೂ ಇದ್ದರು. ಪ್ರಕರಣದಲ್ಲಿ ಇಷ್ಟೆಲ್ಲ ಭಾಗಿಯಾದ ಮೇಲೂ ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ಸರಿಯಲ್ಲ. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ. ಸರ್ಕಾರ ಇಂತಹ ತಪ್ಪಿತಸ್ಥರಿಗೆ ರಕ್ಷಣೆ ಕೊಡಬಾರದು, ದುರಂತಕ್ಕೆ ಸಿಎಂ ಸೇರಿದಂತೆ ಇಡಿ ಸರ್ಕಾರವೇ ಅವರ ರಕ್ಷಣೆಗೆ ನಿಂತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.
ರಾಜಕೀಯ ಸ್ವಾರ್ಥಕ್ಕಾಗಿ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಬೇಕೆಂಬ ಕಾರಣಕ್ಕೆ ಡಿಕೆಶಿ ಹೂಡಿರುವ ಸಂಚು ಏನು ಎಂಬುದು ಜಗಜ್ಜಾಹೀರಾಗಿದೆ. ಇಡೀ ದೇಶವೇ ಆ ವ್ಯಕ್ತಿಯ ಹೀನ ಕೆಲಸದ ಬಗ್ಗೆ ಮಾತನಾಡುತ್ತಿದೆ. ನೊಂದ ಮಹಿಳೆಯರ ಜೀವನಕ್ಕೆ ಕೊಳ್ಳಿ ಇಟ್ಟ ಈ ವ್ಯಕ್ತಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇಂದು ವೇಳೆ ಸರ್ಕಾರ ಈ ಕಳಂಕಿತ ಸಚಿವನನ್ನು ರಕ್ಷಣೆ ಮಾಡಿದರೆ ಭಾರೀ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೇವರಾಜೇಗೌಡ, ಶಿವರಾಮೇಗೌಡ ನಡುವಿನ ಮೊಬೈಲ್ ಸಂಭಾಷಣೆ ಹೊರಬಂದಾಗಿನಿಂದ ಡಿಕೆಶಿ ಮಾತನಾಡುತ್ತಿಲ್ಲ. ಅದಕ್ಕೆ ನಾನು ಕೇಳಿದ್ದು, ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು. ಇದಕ್ಕೆ ನಾವು ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಮೊದಲಿನಿಂದಲೂ ಹೇಳಿದ್ದೇನೆ, ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು ಎಂದಿದ್ದೇನೆ. ತಪ್ಪಿತಸ್ಥರನ್ನು ರಕ್ಷಣೆ ಮಾಡಲು ನಾವು ಹೋಗುವುದಿಲ್ಲ. ಆದರೆ, ಈ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡರೆ ದೇವೆಗೌಡರ ಕುಟುಂಬವನ್ನು ರಾಜಕೀಯವಾಗಿ ನಿರ್ನಾಮ ಮಾಡಬೇಕು ಎಂದು ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಪೆನ್ ಡ್ರೈವ್ ಸೃಷ್ಟಿ ಮಾಡಿ ಅದನ್ನೆಲ್ಲಾ ಹೊರಗೆ ತಂದು ಮಹಿಳೆಯರಿಗೆ ಕಂಟಕರಾದವರೇ ಇವತ್ತು ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಎನ್ ಡಿಎ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷವನ್ನು ಯಾವಾಗ ಹೊರಕ್ಕೆ ಹಾಕುತ್ತೀರಿ ಎಂದು ಕೇಳುತ್ತಾರೆ. ಆಡಿಯೋ ಸಂಭಾಷಣೆಯಲ್ಲಿ ಈ ಅಂಶವೂ ಇದೆ. ಅಲ್ಲಿಗೆ ಇವರ ದುರುದ್ದೇಶ ಏನು ಎನ್ನುವುದು ಅರ್ಥ ಆಯಿತಲ್ಲವೇ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ಈ ಪ್ರಕರಣಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಡಿಸಿ ಅದನ್ನು ದೇಶ ವಿದೇಶದಲ್ಲಿಯೂ ಹರಡುವಂತೆ ಮಾಡಿದವರೇ ಕಾಂಗ್ರೆಸ್ ನವರು. ಬಿಜೆಪಿ ಜೆಡಿಎಸ್ ಮೈತ್ರಿ ಆಗದೇ ಇದ್ದಿದ್ದರೆ ಅವರು ರಾಜ್ಯದಲ್ಲಿ 20 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಭ್ರಮೆಯಲ್ಲಿ ಇದ್ದರು. ಅವರ ಕನಸು ನುಚ್ಚು ನೂರಾಗಿದೆ. ಚುನಾವಣೆ ಫಲಿತಾಂಶ ಹೇಗೆ ಬರುತ್ತದೆ ಎನ್ನುವ ಹತಾಶೆಯಲ್ಲಿ ಅವರು ಇದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ದಿನವೇ ಅವರಿಗೆ ಅರ್ಥವಾಯಿತು, ನಮ್ಮ ಓಟಕ್ಕೆ ಕಡಿವಾಣ ಬಿತ್ತು ಎಂದುಕೊಂಡರು. ಈ ಆತಂಕಕ್ಕೆ ಒಳಗಾಗಿ ಈ ಪ್ರಕರಣಕನ್ನು ಸೃಷ್ಟಿಸಿ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ್ದೆ ಇದೇ ಡಿ.ಕೆ.ಶಿವಕುಮಾರ್ ಎಂದು ಅವರು ನೇರ ಆರೋಪ ಮಾಡಿದರು.
ಸೀಡಿ ಶಿವು ಇದನ್ನೆಲ್ಲಾ ಮಾಡಿದ್ದಾರೆ
ಡಿ.ಕೆ.ಶಿವಕುಮಾರ್ ಮತ್ತು ಇವರ ಪಟಾಲಂಗಳು ಇದನ್ನು ಮಾಡಿದ್ದಾರೆ. ‘ಸೀಡಿ ಶಿವು’ ಅವರೇ ಇದನ್ನೆಲ್ಲ ಮಾಡಿದ್ದಾರೆ. ಆದರೆ, ಇದುವರೆಗೂ ಯಾರ ಮೇಲೆಯೂ ಕ್ರಮ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಕಟುವಾಗಿ ಟೀಕಿಸಿದರು.
ಈ ನೆಲದ ಕಾನೂನಿನ ಪ್ರಕಾರ ಯಾರೇ ಆದರೂ ನ್ಯಾಯಕ್ಕೆ ತಲೆ ಬಾಗಲೇಬೇಕು. ನಿತ್ಯವೂ ಹಣ, ಅಧಿಕಾರದ ದುರುಪಯೋಗ ಮಾಡಿಕೊಂಡು ಮೆರೆಯುವ ವ್ಯಕ್ತಿಗಳು ಬಹಳ ದಿನ ಮೆರೆಯುವುದಕ್ಕೆ ಸಾಧ್ಯ ಇಲ್ಲ. ಪ್ರತಿಯೊಂದಕ್ಕೂ ಅಂತಿಮ ದಿನಗಳು ಬಂದೇ ಬರುತ್ತವೆ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಪೆನ್ ಡ್ರೈವ್ ಹಂಚಿಕೆ ಪ್ರಕರಣದ ತನಿಖೆ ಸಿಬಿಐ ಕೊಡಲಿ ಎನ್ನುವ ಉದ್ದೇಶದಿಂದ ಯಾರೋ ಒಬ್ಬರು ಹೈಕೋರ್ಟ್ ಮೊರೆ ಹೋಗುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ನಾವು ಕೂಡ ಏನು ಮಾಡಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ಕಾನೂನು ಚೌಕಟ್ಟಿನಲ್ಲಿ, ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಾಂಶ ಹೊರಗೆ ತರಲು ಏನೇನು ಕ್ರಮ ತೆಗೆದುಕೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ದೇವೇರಾಜೇಗೌಡರಿಗೆ ಜೈಲಿನಲ್ಲಿ ಜೀವ ಭಯ
ಜೈಲಿನಲ್ಲಿ ವಕೀಲ ದೇವೇರಾಜೇಗೌಡರಿಗೆ ಜೀವ ಭಯ ಇದೆ ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇರಬಹುದು. ಈ ಸರ್ಕಾರದಲ್ಲಿ ಇರುವ ಬಹಳ ಜನರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎನ್ನುವ ಹಿನ್ನಲೆಯಲ್ಲಿ ನೋಡಿದರೆ ನಿಜ ಇರಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮಾಜಿ ಶಾಸಕ ಸುರೇಶ್ ಗೌಡ ಅವರು ಹೇಳಿರಬಹುದು ಎಂದರು ಕುಮಾರಸ್ವಾಮಿ ಅವರು.
ವಾಪಸ್ ಬರುವಂತೆ ಮತ್ತೆ ಪ್ರಜಲ್ ಗೆ ಹೇಳಿದ ಹೆಚ್ಡಿಕೆ
ಪ್ರಜ್ವಲ್ ಗೆ ಈಗಾಗಲೇ ವಾಪಸ್ ಬರುವಂತೆ ಮನವಿ ಮಾಡಿದ್ದೇನೆ. ಎಲ್ಲೇ ಇದ್ದರೂ ಬಂದು SIT ಮುಂದೆ ಹಾಜರಾಗು ಎಂದು ಸಂದೇಶ ನೀಡಿದ್ದೇನೆ ಎಂದ ಅವರು; ನನಗೆ ಪ್ರಜ್ವಲ್ ಸಂಪರ್ಕದಲ್ಲಿ ಇಲ್ಲ. ಆ ಕಾರಣಕ್ಕೆ ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದೇನೆ.ನಾನೂ ಕೂಡ ವಾಪಸ್ ಬರುತ್ತಾನೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ದೇವೇಗೌಡರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಗೌರವ ಎನ್ನುವುದು ಇದ್ದರೆ ವಾಪಸ್ ಬಾ.. ಎಂದು ಹೇಳಿದ್ದೇನೆ. ಈ ಕೂಡಲೇ ವಾಪಸ್ ಬಾ.. ಎಂದು ಮತ್ತೆ ನಿಮ್ಮ (ಮಾಧ್ಯಮಗಳು) ಮೂಲಕ ಮನವಿ ಮಾಡುತ್ತೇನೆ ಎಂದರು.
ಸಾಕ್ಷ್ಯ ಬೇಕೆಂದ ಸಿಎಂ ವಿರುದ್ಧ ಕಿಡಿ
ಪೆನ್ ಡ್ರೈವ್ ಕೇಸ್ ನಲ್ಲಿ ಸಾಕ್ಷ್ಯ ಕೇಳಿದ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಕುಮಾರಸ್ವಾಮಿ ಅವರು; ಮಾಧ್ಯಮಗಳಲ್ಲಿ ಬಿಡುಗಡೆ ಆಗಿರುವ ಶಿವರಾಮೇಗೌಡ, ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ನಡುವಿನ ಮೊಬೈಲ್ ಸಂಭಾಷಣೆಗಿಂತ ಬೇರೆ ಸಾಕ್ಷ್ಯ ಬೇಕಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ಅರ್ಧ ನಿಮಿಷ ಮಾತಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತನಾಡಿರುವುದೇ ಸಾಲದೇ? ಆದರೆ, ಸಿಎಂ ಅವರು ಸಾಕ್ಷ್ಯ ಕೊಡಿ, ಸಾಕ್ಷ್ಯ ಕೊಡಿ ಎಂದು ಕೇಳುತ್ತಿದ್ದಾರೆ. SIT ತಂಡ 7-8 ಜನರನ್ನು ಬಂಧನ ಮಾಡಿ ಕರೆದುಕೊಂಡು ಬಂದಿದ್ದಾರೆ. ಯಾವ ಸಾಕ್ಷ್ಯಗಳ ಆಧಾರದಲ್ಲಿ ಅವರನ್ನು ಕರೆದುಕೊಂಡು ಬಂದಿದ್ದಾರೆ. ಅವರಿಗೂ ಪ್ರಕರಣಕ್ಕೂ ಏನು ಸಂಬಂಧ? ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದ ಹಾಗೇ ಇದೆ, ಇದೆಲ್ಲವನ್ನೂ ಡಿ.ಕೆ.ಶಿವಕುಮಾರ್ ಅವರೇ ಮಾಡಿರುವುದು ಎಂದು ಅವರು ನೇರ ಆರೋಪ ಮಾಡಿದರು.
ಅವರೇ ಮೊಬೈಲ್ ಸಂಭಾಷಣೆಯಲ್ಲಿ ಇನ್ನು ಏನೇನು ಮಾಹಿತಿ, ಸಾಕ್ಷ್ಯ ಇದೆ ತೆಗೆದುಕೊಂಡು ಬಾ.. ಎಂದು ದೇವರಾಜೇ ಗೌಡನಿಗೆ ಹೇಳಿದ್ದಾರೆ. ಇದಕ್ಕಿಂತ ಇನ್ನೂ ಏನು ಸಾಕ್ಷ್ಯ ಬೇಕು? ಅವರ ಜತೆ ಮಾತನಾಡುವಾಗ ಡಿಕೆಶಿ, ಪೊಲೀಸ್ ದೂರನ್ನು ಕಷ್ಟ ಪಟ್ಟು ಕೊಡಿಸಿದ್ದೇವೆ ಎನ್ನುತ್ತಾರೆ. ಸಿಎಂಗೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.
ಸಿದ್ದರಾಮಯ್ಯ ಅವರು 6 ಪ್ರಶ್ನೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ನನ್ನು ಮುಖ್ಯಮಂತ್ರಿಗಳು ಅಪರಾಧಿ ಮಾಡಿ ಬಿಟ್ಟಿದ್ದಾರೆ. ಇನ್ನು ಪ್ರಜ್ವಲ್ ಆರೋಪಿ ಸ್ಥಾನದಲ್ಲಿ ಇದ್ದಾನೆ. ಅಪರಾಧಿ ಅಂತ ಇನ್ನು ಎಲ್ಲಿ ಸಾಬೀತಾಗಿದೆ? ತನಿಖಾ ತಂಡದವರೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ, ವಿಡಿಯೋಗಳಲ್ಲಿ ಪುರುಷನ ಮುಖವೇ ಕಾಣಲ್ಲ ಎಂದು. ಇದು ಸಿಎಂಗೆ ಗೊತ್ತಿಲ್ಲವೇ? ನೈತಿಕತೆ ಉಳಿಸಬೇಕು ಎಂದೇ ಆತನ ವಿರುದ್ಧ ಕೇಳಿ ಬಂದ ತಕ್ಷಣ ಪಕ್ಷದಿಂದ ಅಮಾನತು ಮಾಡಿದ್ದೇವೆ. ನಾವು ಸಿದ್ದರಾಮಯ್ಯ ತರಹ ಭಂಡತನ ಮಾಡಿಲ್ಲ. ಆ ಭಂಡತನದಲ್ಲಿ ನಿಮ್ಮ ಮಗನದ್ದು ನಡೆಯಿತಲ್ಲ.. ಅಪ್ಪ..ಅಪ್ಪ.. ನಾನು ಕೊಟ್ಟಿದ್ದೇ 5 ಹೆಸರು, 6 ಹೆಸರು ಎಲ್ಲಿಂದ ಬಂತು ಹೇಳಿ ಎಂದು ಕಥೆ ಕಟ್ಟಿದಿರಲ್ಲ? ನಿಮ್ಮ ಮಗನ ಹೆಸರು ಬಂದ ಕೂಡಲೇ ಅದಕ್ಕೆ CSR ಫಂಡ್ ಎಂದು ಬಣ್ಣ ಹಚ್ಚಿದ್ದು ಗೊತ್ತಿಲ್ಲವೇ ಎಂದು ನೇರವಾಗಿ ಸಿಎಂಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ.
ಸಾಕ್ಷ್ಯ ನಾಶ ಯಾವ ರೀತಿ ಮಾಡಬಹುದು ಎನ್ನುವುದಕ್ಕೆ ನಿಮಗಿಂತ ಒಳ್ಳೆಯ ಉದಾಹರಣೆ ಬೇಕಾ? ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕ್ಷ್ಯಗಳನ್ನು ಯಾವ ರೀತಿ ತಿದ್ದಬಹುದು ಎಂದು ಸಾಬೀತು ಮಾಡಿದ್ದೀರಿ. ಈಗಲೂ ನೀವು ಮಾಡುತ್ತಿರುವುದು ಅದೇ ಕೆಲಸ. ಅಷ್ಟು ಸ್ಪಷ್ಟವಾಗಿ ಒಬ್ಬ ಡಿಸಿಎಂ ಮಾತನಾದಿರುವುದು ಕಣ್ಣ ಮುಂದೆಯೇ ಇದೆ, ಆದರೂ ಸಾಕ್ಷ್ಯ ಕೇಳುತ್ತಿದ್ದೀರಿ ಎಂದು ಟೀಕಾ ಪ್ರಹಾರ ನಡೆಸಿದರು.
ಕಾರ್ತಿಕ್ ಗೌಡ, ನವೀನ್ ಗೌಡ ಸೇರಿ ಪೆನ್ ಡ್ರೈವ್ ಹಂಚಿದ ಕಿಡಿಗೇಡಿಗಳನ್ನು ಇವತ್ತಿನವರೆಗೂ ಬಂಧಿಸಿಲ್ಲ. ಎಸ್ ಐಟಿಗೆ ಹೇಳಿಕೆ ನೀಡಿದ್ದಾನೆ ಎನ್ನುತ್ತೀರಿ, ಹಾಗಾದರೆ ಅವನು ಯಾರ ವಶದಲ್ಲಿ ಇದ್ದಾನೆ. ಯಾವತ್ತೂ ಅವನು ತನಿಖಾ ತಂಡಕ್ಕೆ ಹೇಳಿಕೆ ಕೊಟ್ಟ? ಅವನನ್ನು ಯಾಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿಲ್ಲ? ಇದಈಲ್ಲಿ ಏನೋ ಹುನ್ನಾರ ಇದೆ. ಮುಖ್ಯಮಂತ್ರಿ ಇದಕ್ಕೆ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸಿಎಂ ಅವರು ಇಷ್ಟು ಲಘುವಾಗಿ ಮಾತಾಡೋದು ಬೇಡ. ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೇ ನುಣಿಚಿಕೊಳ್ಳುತ್ತಿದ್ದಾರೆ. ಈ ಪ್ರಕರಣವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿಲ್ಲ. ಇದು SIT ತಂಡ ಅಲ್ಲ. ಇದು SIT ದಂಡ! ಸುಖಾಸುಮ್ಮನೆ ದಂಡಕ್ಕೆ ಇದನ್ನು ರಚನೆ ಮಾಡಲಾಗಿದೆ. SIT ದಂಡವನ್ನು ತಮಗೆ ಆಗದವರ ಮೇಲೆ ಪ್ರಯೋಗ ಮಾಡಲು ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
BREAKING: ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ‘2.5 TMC ನೀರು’ ಹರಿಸುವಂತೆ ‘CWMA ಆದೇಶ’