ತುಮಕೂರು : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೆ.ಎನ್ ರಾಜಣ್ಣ ಮಂಕಾಗಿದ್ದಾರೆ.ಅಲ್ಲದೇ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧವೆ ಬೇಸರ ಆಗಿದ್ದಾರೆ. ಇದೀಗ ರಾಜಣ್ಣ ಹೇಳೋಕೆಯೊಂದು ಭಾರಿ ವೈರಲ್ ಆಗಿದ್ದು, ಯಾವ ಪಕ್ಷದ ಬಾವುಟ ಹಿಡಿಬೇಕು ಎನ್ನುವುದನ್ನು ನಾನು ಮುಂದಿನ ದಿನದಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಕೆ.ಎನ್ ರಾಜಣ್ಣ ಸಾರ್ವಜನಿಕ ಭಾಷಣದಲ್ಲಿ ಹೇಳಿರೋದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಮಧುಗಿರಿ ತಾಲೂಕಿನ ದೊಡ್ಡೆರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ, ನಾನು ಮಧುಗಿರಿ ಕ್ಷೇತ್ರಕ್ಕೆ ಬಂದಾಗ ಕಾರ್ಯಕರ್ತರು ಕಾಂಗ್ರೆಸ್ (Congress0 ಬಾವುಟ ಹಿಡಿದು ರ‍್ಯಾಲಿ ಮಾಡುತಿದ್ದರು. ಇವತ್ತಿನ ರ‍್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿಯಲೇ ಇಲ್ಲ. ಅವರಿಗೂ ಕಾಂಗ್ರೆಸ್ ಪಕ್ಷದ ಮೇಲೆ ಬೇಸರ ತರಿಸಿದಂತಿದೆ. ಮುಂದಿನ ದಿನದಲ್ಲಿ ಯಾವ ಬಾವುಟ ಹಿಡಿಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇನೆ ಎಂದರು.
2004 ರಲ್ಲಿ ಕಾಂಗ್ರೆಸ್ ಪಕ್ಷ ನನ್ನನ್ನು ಗೌರವದಿಂದ ನೋಡಿಕೊಂಡಿರಲಿಲ್ಲ. ಆಗ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವೈಟ್ ವಾಶ್ ಮಾಡಿದ್ದೆವು. ಕಾಂಗ್ರೆಸ್ ಅನ್ನು ಕಂಪ್ಲೀಟ್ ಮುಗಿಸಿದ್ವಿ. ಜಿಲ್ಲೆಯಲ್ಲಿ ಮತ್ತೇ ಆ ಸಂದರ್ಭ ಬರುತ್ತೋ ಏನೋ ಗೊತ್ತಿಲ್ಲ ಎಂದಿದ್ದಾರೆ. ಆ ಮೂಲಕ ರಾಜಣ್ಣ ಕಾಂಗ್ರೆಸ್ ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದರಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.








