ಕೋಲಾರ : ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಮೂಲಕ ದಾಳಿ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ. ಉಗ್ರರ ಹತ್ಯೆಯ ಕುರಿತು ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಂಧೂರ ಕಾರ್ಯಾಚರಣೆಯ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಆದರೆ ಕಾರ್ಯಾಚರಣೆ ನನಗೆ ಸಮಾಧಾನ ತಂದಿಲ್ಲ ಅಂತ ಹೇಳಿದ್ದೇನೆ. ಪಹಲ್ಗಾಮ್ ದಾಳಿಯ ಉಗ್ರರನ್ನು ಮೊದಲು ಸದೆಬಡಿಯಬೇಕಿತ್ತು. ಬಳಿಕ ಪಾಕಿಸ್ತಾನ ಕುಮ್ಮಕ್ಕು ಕೊಟ್ಟಿದ್ದ ಉಗ್ರರ ನೆಲೆಗಳನ್ನು ನಾಶಪಡಿಸಬೇಕಿತ್ತು. ದೇಶ ಯೋಧರು ಅಥವಾ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಉಗ್ರರ ನೆಲೆ ಧ್ವಂಸಗೊಳಿಸಿ ಹತ್ಯೆಗೈದ ಬಗ್ಗೆ ಹೇಳಿದ್ದನ್ನು ಕೇಳಿದ್ದೆ ಅದರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ.
ಜನರು ನನ್ನ ಬಳಿ ಹೇಳಿಕೊಂಡ ಕೆಲವೊಂದು ವಿಚಾರಗಳನ್ನು ಹೇಳಿದ್ದೇನೆ. ದೇಶದ ಸಾಮಾನ್ಯ ಪ್ರಜೆಯಾಗಿ ನಾನು ಕೇಳಿದ್ದೇನೆ. ಈಗಲೂ ಪಹಲ್ಗಾಂ ನಲ್ಲಿ ದಾಳಿ ಮಾಡಿದ ಉಗ್ರರನ್ನು ಮೊದಲು ಸದೆಬಡಿಯಬೇಕು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಕೊಂದ ಉಗ್ರರನ್ನು ಹತ್ಯೆ ಮಾಡಬೇಕು ಎಂದು ಕೊತ್ತೂರು ಮಂಜುನಾಥ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.