ಮಂಡ್ಯ :- ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯಲು ಪೊಲೀಸರ ಗುಂಡೇಟಿಗೆ ಹೆದರದೆ ಹೋರಾಟ ನಡೆಸಿ, ಹುತಾತ್ಮರಾದ ರೈತರ ಹೋರಾಟ ಅವಿಸ್ಮರಣೀಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೋಮವಾರ ಹೇಳಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಗೆಜ್ಜಲಗೆರೆ ಗೋಲಿಬಾರ್ ನಲ್ಲಿ ಮಡಿದ ವಳಗೆರೆಹಳ್ಳಿಯ ನಾಥೇಗೌಡ ಗೆಜ್ಜಲಗೆರೆ ಸಿದ್ದಪ್ಪ ಅವರ 43ನೇ ವರ್ಷದ ಹುತಾತ್ಮ ದಿನಾಚರಣೆ ಹಾಗೂ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಕಬ್ಬು ಬೆಳೆಗಾರರಿಗಾಗಿ ಸ್ಥಾಪಿಸಿದ್ದ ಸಂಘವೇ ಮುಂದೆ ರೈತ ಸಂಘವಾಯಿತು. ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 1982 ರಲ್ಲಿ ಕಾರ್ಖಾನೆಗೆ ಒಪ್ಪಿಗೆ ಮಾಡಿದ ರೈತರಿಗೆ ಒಂದು ರೀತಿಯ ಹಣ, ಒಪ್ಪಿಗೆ ಮಾಡಿಸದ ರೈತರಿಗೆ ಒಂದು ರೀತಿಯ ಹಣ ನೀಡುತ್ತಿತ್ತು. ಇದರಿಂದ ಬೇಸತ್ತು ರೈತರು ಹೋರಾಟಕ್ಕಿಳಿದಿದ್ದು, ಬಂಡವಾಳ ಶಾಹಿಗಳ ಪರವಾಗಿದ್ದ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರ ಸರ್ಕಾರ ವಳಗೆರೆಹಳ್ಳಿ ನಾಥೇಗೌಡ, ಗೆಜ್ಜಲಗೆರೆ ಸಿದ್ದಪ್ಪ ಅವರನ್ನು ಗುಂಡಿಕ್ಕಿ ಕೊಂದಿತು. ಸಕ್ಕರೆ ಕಾರ್ಖಾನೆಗಳು ಇಂದಿಗೂ ಕೂಡ ಕಬ್ಬಿಗೆ ಸರಿಯಾದ ಬೆಲೆ ನೀಡುತ್ತಿಲ್ಲ. ರಾಜ್ಯದಲ್ಲಿ ನರಗುಂದ, ನವಲಗುಂದ, ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಸೇರಿದಂತೆ ವಿವಿಧೆಡೆ ನಡೆದ ಗೋಲಿಬಾರ್‌ನಿಂದ 159 ಮಂದಿ ರೈತರು ಪೋಲಿಸರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತ ಸಂಘ ರೈತರ ಸಮಸ್ಯೆ ಬಗೆಹರಿಸಲು ವೈಚಾರಿಕವಾಗಿ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಪೊಲೀಸರ ಮತ್ತು ಸರ್ಕಾರಗಳ ಗುಂಡೇಟಿಗೆ ರೈತರು ಹೆದರುವುದಿಲ್ಲ. ರೈತರ ಮೇಲೆ ಸರ್ಕಾರಗಳು ನಡೆಸುವ ಕ್ರೌರ್ಯದ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತದೆ. ಹುತಾತ್ಮರಾದ ಎಲ್ಲಾ ರೈತ ನಾಯಕರು, ರೈತಪರ ಹೋರಾಟಗಾರರ ದಾಖಲೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರಾಜ್ಯ ಸಂಚಾಲಕಿ ಮಮತಾ, ಮುಖಂಡರಾದ ಎಂ.ವಿ.ರಾಜೇಗೌಡ, ಕೆ.ಆರ್.ಜಯರಾಂ, ಮಲ್ಲಯ್ಯ, ತಿಮ್ಮೇಗೌಡ, ಬೋರಾಪುರ ಶಂಕರೇಗೌಡ, ಜಿ.ಎ.ಶಂಕರ್, ವೀರಪ್ಪ, ಲಿಂಗಾಪ್ಪಾಜಿ ಮತ್ತಿತತರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ








