ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು ಶಾಸಕರಾದ ನಂತರದಲ್ಲಿ ತಾಲ್ಲೂಕಿನಲ್ಲಿ ರೈತರ ಮೇಲೆ ಕಿರುಕುಳ ಜಾಸ್ತಿಯಾಗುತ್ತಿದೆ. ರೈತರ ಮೇಲಿನ ಕಿರುಕುಳ ಇದೇ ರೀತಿ ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಳೆದ ಎರಡೂವರೆ ವರ್ಷದಲ್ಲಿ ಹಲವು ರೈತರು ಶಾಸಕರ ಸೂಚನೆಯಂತೆ ಅಧಿಕಾರಿಗಳ ವಕ್ರ ದೃಷ್ಟಿ ಬಿದ್ದು ತಮ್ಮ ಜಮೀನು, ಫಸಲು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ಭೂಕಾಯ್ದೆಗೆ ಯಾವುದೆ ಹೊಸ ತಿದ್ದುಪಡಿ ತಂದಿಲ್ಲ. ಆದರೂ ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ರೈತರ ಫಸಲು ನಾಶಪಡಿಸಿ ಒಕ್ಕಲೆಬ್ಬಿಸುತ್ತಿದ್ದಾರೆ. ಹಿರಳೇ ತಿಮ್ಮಪ್ಪ ಎಂಬುವವರ ಶುಂಠಿ ಫಸಲು ನಾಶ ಮಾಡಿದ್ದು, ತಾಲೂಕಿನ ಕೋಗಾರಿನಲ್ಲಿ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡಿದ ನಾಗರಾಜ್ ಎಂಬುವವರ ಫಸಲು ನಾಶ ಮಾಡಲಾಗಿದೆ ಎಂದು ಆರೋಪಿಸಿದರು.
ಚನ್ನಶೆಟ್ಟಿಕೊಪ್ಪದ ಜಂಬೂರುಮನೆ ಗ್ರಾಮದ ಸ.ನಂ. 18ರಲ್ಲಿ ರಾತ್ರಿ 8 ಗಂಟೆಗೆ ಅರಣ್ಯಾಧಿಕಾರಿಗಳು ಮನೆಗೆ ನುಗ್ಗಿ ಮನೆ ಧ್ವಂಸ ಮಾಡಿದ್ದಾರೆ. ಇದಕ್ಕೆ ಬೇಕಾದ ದಾಖಲೆ ನಮ್ಮ ಬಳಿ ಇದೆ. ರಾತ್ರಿ ವೇಳೆ ಹೋಗಿ ಮನೆ ತೆರವು ಮಾಡುವ ಸಂದರ್ಭದಲ್ಲಿ ಹೆಚ್ಚುಕಡಿಮೆಯಾಗಿದ್ದರೆ ಅದಕ್ಕೆ ಹೊಣೆ ಯಾರು ಇದಕ್ಕೆ ಉತ್ತರ ನೀಡಲಿ ,ಅರಣ್ಯಾಧಿಕಾರಿಗಳಿಗೆ ಕೇಳಿದರೆ ರಾಜಕೀಯ ಒತ್ತಡ ಇದೆ ಎಂದು ಹೇಳುತ್ತಾರೆ. ಚುನಾವಣೆ ಇನ್ನಿತರೆ ಸಂದರ್ಭದಲ್ಲಿ ತಮ್ಮ ಪಕ್ಷ ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ರೈತರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇರುವಕ್ಕಿಯಲ್ಲಿ ಇತರೆ ಜನಾಂಗಗಳ ಜಮೀನು ತೆರವು ಮಾಡದೆ ಮೂರು ಜನ ಬಡ ಬ್ರಾಹ್ಮಣ ಕುಟುಂಬದ ಜಮೀನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಧ್ವನಿ ಇಲ್ಲದ ಬ್ರಾಹ್ಮಣರ ಜಮೀನು ಸ್ವಾಧೀನಪಡಿಸಿಕೊಂಡಿದ್ದರು. ಹಿಂದಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಈತನಕ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಈ ಸರ್ಕಾರದಲ್ಲಿ ರೈತರಿಗೆ ಸೂಕ್ತ ರಕ್ಷಣೆ ಇಲ್ಲ. ರೈತರನ್ನು ಜೈಲಿಗೆ ಕಳಿಸಿದ ಕೀರ್ತಿ ಸಾಗರ ಕ್ಷೇತ್ರದ ಶಾಸಕರಿಗೆ ಸಲ್ಲುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ, ನಾನು ಶಾಸಕನಾಗಿದ್ದಾಗ ಒಬ್ಬನೇ ಒಬ್ಬ ರೈತರನ್ನು ಒಕ್ಕಲೆಬ್ಬಿಸಿರಲಿಲ್ಲ. ಮಾತೆತಿದರೆ ಪಾಪಿ ಹಾಲಪ್ಪ ಎನ್ನುತ್ತಿದ್ದಾರೆ. ಇದಕ್ಕೆ ತಕ್ಕ ಸಮಯದಲ್ಲಿ ಉತ್ತರ ನೀಡುತ್ತೇನೆ ಎಲ್ಲಾ ಪ್ರಕರಣಗಳನ್ನು ಜನತೆ ಗಂಭೀರವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ನೆರೆಯಿoದ ಮನೆ ಕಳೆದುಕೊಂಡವರಿಗೆ ನಮ್ಮ ಸರ್ಕಾರ 5 ಲಕ್ಷ ರೂ.ಪರಿಹಾರ ನೀಡುತಿತ್ತು. ಈಗಿನ ಕಾಂಗ್ರೇಸ್ ಸರ್ಕಾರ 1.20 ಲಕ್ಷ ರೂ. ಪರಿಹಾರ ನೀಡುತ್ತಿದ್ದು ಅದನ್ನು ಸಹ ಈತನಕ ನೀಡಿಲ್ಲ. ಹಾನಿಗೊಳಗಾದ ಮನೆಗಳಿಗೆ ಕನಿಷ್ಟ 10 ಲಕ್ಷ ರೂ. ಪರಿಹಾರ ನೀಡಬೇಕು. ಎರಡು ತಾಲ್ಲೂಕಿಗೆ ಒಬ್ಬರೆ ತಹಶೀಲ್ದಾರ್ ಇದ್ದಾರೆ. ಅಧಿಕಾರಿಗಳು ಸಾಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಸಾಗರದಲ್ಲಿ ಹೇಗೆ ಆಡಳಿತ ನಡೆಯುತ್ತಿದೆ ಎಂಬುದು ನೀವೇ ತಿಳಿದುಕೊಳ್ಳಿ ಎಂಬುದಾಗಿ ವಾಗ್ಧಾಳಿ ನಡೆಸಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ಕೊಟ್ರಪ್ಪ ನೇದರವಳ್ಳಿ, ಸುವರ್ಣ ಟೀಕಪ್ಪ, ಗಿರೀಶ್ ಹಕ್ರೆ, ಧನರಾಜ್, ಜೆ.ಕೆ.ಭೈರಪ್ಪ, ಪರಮೇಶ್ವರ ಕರೂರು, ನಾರಾಯಣಪ್ಪ ಕೆಳದಿ, ಸುಜಯ ಶೆಣೈ, ಶಿವಕುಮಾರ್ ಹಾಜರಿದ್ದರು.
2 ವರ್ಷ 3 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ಸಿಎಂ ಸಿದ್ಧರಾಮಯ್ಯ