ಬೆಂಗಳೂರು : “ಪ್ರಪಂಚವೇ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ನಮ್ಮ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಬದ್ಧವಾಗಿದೆ. ಉದ್ಯಮಿಗಳು, ನೌಕರರು ಬೆಂಗಳೂರು ಬಿಟ್ಟು ನೆರೆಯ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಬೇಕು. ಪ್ರಪಂಚದ, ದೇಶದ ಜನರನ್ನು ಕರ್ನಾಟಕ ಮುಕ್ತವಾಗಿ ಸ್ವಾಗತಿಸುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಶುಕ್ರವಾರ ನಡೆದ ʼಬೆಂಗಳೂರು ಟೆಕ್ ಸಮ್ಮಿಟ್ʼ ಅಂತರರಾಷ್ಟ್ರೀಯ ಶೃಂಗಮೇಳದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಯಾವ ಸರ್ಕಾರ ಈ ರೀತಿಯ ಬದ್ದತೆ ಹೊಂದಿದೆ ಎಂಬುದನ್ನು ನೀವು ಅರಿಯಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರು ಇಲಾಖೆಯಿಂದ ಕೈಗೊಂಡಿರುವ ಕಾರ್ಯಗಳ ಬಗ್ಗೆ ಹೊರ ತಂದಿರುವ ಕಿರುಹೊತ್ತಿಗೆ ಇದಕ್ಕೆ ಸಾಕ್ಷಿ. ಉದ್ಯೋಗದಾತರು ಬಲಗೊಂಡಷ್ಟು ನೌಕರರ ಶಕ್ತಿಯೂ ಹೆಚ್ಚುತ್ತದೆ. ಆರ್ಥಿಕತೆಯೂ ಬಲಗೊಳ್ಳುತ್ತದೆ, ದೇಶದ ಶಕ್ತಿಯೂ ಹೆಚ್ಚುತ್ತದೆ” ಎಂದು ತಿಳಿಸಿದರು.
“ಉದ್ಯಮಿಗಳು ನಮ್ಮ ಶಕ್ತಿಯ ರಾಯಭಾರಿಗಳು. ಬೆಂಗಳೂರು ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ನಾಡಪ್ರಭು ಕೆಂಪೇಗೌಡರಿಗೂ ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎನ್ನುವ ಕಲ್ಪನೆಯೇ ಇರಲಿಲ್ಲ. ಸುಮಾರು 1.4 ಕೋಟಿ ಜನಸಂಖ್ಯೆಯಿದ್ದು ದೇಶದ ನಾನಾ ಕಡೆಗಳಿಂದ ಜನರು ಬರುತ್ತಿರುವುದನ್ನು ತಪ್ಪಿಸಿ ನಗರದ ಮೇಲಿನ ಒತ್ತಡ ಕಡಿಮೆ ಮಾಡಬೇಕಾಗಿದೆ. ಆದ ಕಾರಣ ರಾಜ್ಯದ ಎಲ್ಲಾ ಭಾಗಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಗ್ರಾಮೀಣ ಭಾಗದ ಶಿಕ್ಷಣಕ್ಕೆ ಸುಮಾರು 8 ಸಾವಿರ ಕೋಟಿ ಸಿಎಸ್ ಆರ್ ಹಣ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ” ಎಂದರು.
“200 ಕ್ಕೂ ಹೆಚ್ಚು ಎಂಜಿನಿಯರಿಂಗ್, 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳು ಪ್ರತಿ ವರ್ಷ ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಅಗಾಧ ಮಾನವ ಸಂಪನ್ಮೂಲ ನಮ್ಮಲ್ಲಿದೆ. ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ್ದು ಕರ್ನಾಟಕ. ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದಿದ್ದೇವೆ. 2013 ರ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ 11ಸಾವಿರ ಮೆ.ವ್ಯಾ ಉತ್ಪಾದನೆಯನ್ನು 24 ಸಾವಿರ ಮೆ.ವ್ಯಾಗೆ ಹೆಚ್ಚಳ ಮಾಡಲಾಯಿತು. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭಿಗಳಾಗಿದ್ದೇವೆ” ಎಂದರು.
“ಪ್ರತಿ ದಿನ ತಮಿಳುನಾಡಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಗುರುವಾರದಂದು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ. ಕಳೆದ ವರ್ಷ ಭೀಕರ ಬರಗಾಲದ ಪರಿಣಾಮ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಬೆಂಗಳೂರು ಒಂದರಲ್ಲೇ 7 ಸಾವಿರಕ್ಕೂ ಹೆಚ್ಚು ಬೋರ್ ವೆಲ್ ಗಳು ಬತ್ತಿ ಹೋಗಿದ್ದವು, ಆದರೂ ನೀರಿನ ತೊಂದರೆ ಉಂಟಾಗದಂತೆ ಪರಿಸ್ಥಿತಿ ನಿಭಾಯಿಸಲಾಯಿತು. ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ನೀರಿನ ತೊಂದರೆಯಾಗುವುದಿಲ್ಲ ಎನ್ನುವ ನಂಬಿಕೆಯಿದೆ” ಭರವಸೆ ವ್ಯಕ್ತಪಡಿಸಿದರು.