ಬೆಂಗಳೂರು: ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಕಾರ್ಡ್ ಮಾಡಿ, ಸರ್ಕಾರ ಬಡವರ ಹೊಡ್ಡೆ ಮೇಲೆ ಹೊಡೆದಿದೆ. ಕೇವಲ ಒಬ್ಬರ ಕಾರಣಕ್ಕಾಗಿ ಇಡೀ ಕುಟುಂಬ ರೇಷನ್ ಕಾರ್ಡಿನ ರೇಷನ್ ಮೇಲೆ ಅವಲಂಬಿತವಾಗಿದ್ದದ್ದನ್ನು, ರದ್ದುಗೊಳಿಸಿದ ಬಳಿಕ ಅಕ್ಕಿಗಾಗಿ ಪರದಾಡುವ ಪರಿಸ್ಥಿತಿಯನ್ನು ತಂದಿಟ್ಟಿದೆ.
ಕಾಲ ಬದಲಾದಂತೆ ಆದಾಯವೂ ಹೆಚ್ಚಾಗುತ್ತಿದೆ. ಆದಾಯದಂತೆ ಸರ್ಕಾರದ ನಿಯಮ, ಮಾನದಂಡಗಳು ಬದಲಾವಣೆಯಾಗಬೇಕಿತ್ತು. ಆದರೇ 2017ರಲ್ಲಿ ನಿಗದಿಯಾಗಿದ್ದಂತ ಮಾನದಂಡವನ್ನೇ ಇಟ್ಟುಕೊಂಡು, ಲಕ್ಷಾಂತರ ಕುಟುಂಬಗಳ ಬಿಪಿಎಲ್ ಕಾರ್ಡ್ ಅನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಸಿಎಂ ಸಿದ್ಧರಾಮಯ್ಯ ಮಾತ್ರ ತಾನು ಮಾಡಿದ್ದಲ್ಲ, ಬದಲಾಗಿ ಕೇಂದ್ರ ಸರ್ಕಾರವೆಂದು ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕಚ್ಚಾಟದಲ್ಲಿ ಈಗ ಕೂಸು ಬಡವಾದಂತೆ ಬಿಪಿಎಲ್ ಕಾರ್ಡ್ ರದ್ದಾದಂತ ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.
ಒಂದು ಬಾರಿಗೆ ಅವಕಾಶ ಕೊಡಬೇಕಿತ್ತು
ಬಿಪಿಎಲ್ ಕಾರ್ಡ್ ಹೊಂದಿರೋರು ಯಾರೆಲ್ಲ ಆದಾಯ ತೆರಿಗೆ ಪಾವತಿ ಮಾಡ್ತಾ ಇದ್ದೀರಿ ಅವರು ನಿಮ್ಮ ಹೆಸರನ್ನು ಕಾರ್ಡ್ ನಿಂದ ಡಿಲಿಟ್ ಮಾಡಿಸಿ. ಇಲ್ಲವಾದಲ್ಲಿ ನಿಮ್ಮ ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದುಗೊಳಿಸುವುದಾಗಿ ಒಮ್ಮೆ ಎಚ್ಚರಿಸಿ ಅವಕಾಶ ಕೊಟ್ಟಿದ್ದರೇ, ಲಕ್ಷಾಂತರ ಮಂದಿಯ ಪಡಿತರ ಚೀಟಿ ರದ್ದಾಗುವ ಸಂಭವವೇ ಬರುತ್ತಿರಲಿಲ್ಲ. ಆದರೇ ರೋಗಿ ಬಯಸಿದ್ದು ಹಾಲು ಅನ್ನ, ಸರ್ಕಾರ ಹಿಡನ್ ಸೀಕ್ರೆಟ್ ರೇಷನ್ ಹೊರೆ ತಪ್ಪಿಸೋದು ಎನ್ನುವಂತೆ ಏಕಾಏಕಿ ಆದಾಯ ತೆರಿಗೆ ಪಾವತಿ ನೆಪದ ಕಾರಣ ಒಂದು ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಪೊಡಿಸಿದ್ದು ಮಾತ್ರ ವಿಪರ್ಯಾಸವೇ ಸರಿ.
ಒಮ್ಮೆ ಆದಾಯ ತೆರಿಗೆ ಪಾವತಿದಾರರು ತಮ್ಮ ಹೆಸರು ಡಿಲಿಟ್ ಮಾಡಿಸಿ ಎಂಬುದಾಗಿ ಅವಕಾಶವನ್ನು ಸರ್ಕಾರ ಎಚ್ಚರಿಸಿ ನೀಡಿದ್ದೇ ಆಗಿದ್ದಲ್ಲಿ ಅನೇಕ ಬಡ ಕುಟುಂಬಗಳು ಎಚ್ಚೆತ್ತುಕೊಂಡು ಡಿಲೀಟ್ ಮಾಡಿಸುತ್ತಿದ್ದವು. ಆಗ ಆದಾಯ ತೆರಿಗೆ ಪಾವತಿದಾರನೊಬ್ಬ ಕಾರ್ಡ್ ನಿಂದ ಹೊರಗುಳಿದು, ನ್ಯಾಯಯುತವಾಗಿ ಬಡತನ ರೇಖೆಗಿಂತ ಕೆಳಗಿರುವಂತ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ನಿಂದ ಪಡಿತರ ಲಭ್ಯವಾಗುವಂತೆ ಆಗುತ್ತಿತ್ತು. ಆದರೇ ಅದ್ಯಾವುದನ್ನು ಮಾಡದೇ ಸರ್ಕಾರ ಮಾತ್ರ ಕರ್ನಾಟಕದಲ್ಲಿ ತಾಲ್ಲೂಕು ಮಟ್ಟ ಒಂದರಲ್ಲೇ 2 ರಿಂದ 3 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು ಮಾಡಿದೆ.
ಒಬ್ಬರ ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ನ್ಯಾಯವೇ ಸಿಎಂ ಸಿದ್ಧರಾಮಯ್ಯನವರೇ?
ಬಿಪಿಎಲ್ ಕಾರ್ಡ್ ಹೊಂದಿದ್ದಂತ ಕುಟುಂಬದ ಸದಸ್ಯರೊಬ್ಬರಲ್ಲಿ ಯಾರೋ ಒಬ್ಬರು ನಿವೇಶನ, ಗೃಹ, ಕೃಷಿ ಸೇರಿದಂತೆ ಇತರೆ ಕಾರಣಕ್ಕೆ ಲೋನ್ ಪಡೆಯೋದಕ್ಕೆ ಐಟಿ ಫೈಲ್ ಮಾಡಿದ್ದಾರೆ. ಕೆಲವರು ಟಿಡಿಎಸ್ ವಾಪಾಸ್ ಪಡೆಯೋದಕ್ಕೂ ಐಟಿ ಫೈಲ್ ಮಾಡಿದ್ದಾರೆ. ಹಾಗಂತ ಯಾರೂ ಇಲ್ಲಿ ಆದಾಯ ತೆರಿಗೆ ಪಾವತಿ ಮಾಡಿಲ್ಲ. ಕಾರಣ ಅವರ ಆದಾಯದ ಮಿತಿ ಸರ್ಕಾರ ನಿಗದಿ ಪಡಿಸಿದಂತ ಮಿತಿ ಮೀರಿ ವ್ಯವಹಾರವಾಗಿಲ್ಲ.
ಹೀಗೆ ಇದ್ದರೂ ಎರಡು ಮೂರು ವರ್ಷಗಳ ಹಿಂದಿನ ಆದಾಯ ತೆರಿಗೆ ಪಾವತಿಯ ಹಣಕಾಸು ವ್ಯವಹಾರದ ದತ್ತಾಂಶ ಪಡೆದು, ಒಬ್ಬರ ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಿ, ತಿನ್ನುವ ಅನ್ನಕ್ಕೆ ಮಣ್ಣು ಹಾಕಿದ್ದು ಸಿಎಂ ಸಿದ್ಧರಾಮಯ್ಯ ಅವರೇ ಸರಿಯೇ ಎಂಬುದು ಅನೇಕ ಕುಟುಂಬಗಳ ಪ್ರಶ್ನೆಯಾಗಿದೆ.
ಒಮ್ಮೆ ಹೆಸರು ತೆಗೆಯಲು ಅವಕಾಶ ನೀಡಿ, ಪಾಲಿಸದೇ ಇದ್ದರೇ ಬಿಪಿಎಲ್ ಟು ಎಪಿಎಲ್ ಕಾರ್ಡ್ ಮಾಡೇಬಕಿತ್ತು
ಯಾರೆಲ್ಲ ಆದಾಯ ತೆರಿಗೆ ಪಾವತಿಯನ್ನು ಮಾಡಿದ್ದಾರೋ ಬಿಪಿಎಲ್ ಕಾರ್ಡ್ ಕುಟುಂಬದ ಸದಸ್ಯರು ಅವರ ಹೆಸರು ಡಿಲಿಟ್ ಮಾಡಲು ಅವಕಾಶ ನೀಡಬೇಕಿತ್ತು. ಆಗ ಕುಟುಂಬದ ಒಬ್ಬರ ಕಾರಣಕ್ಕೆ ಇಂದು ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಂಡಿರೋದು ತಪ್ಪುತ್ತಿತ್ತು. ಆದರೇ ಇಲ್ಲಿ ಅದ್ಯಾವುದೂ ಆಗದೇ ಬಿಪಿಎಲ್ ಕಾರ್ಡ್ ಹೊಂದಿರುವಂತ ಕುಟುಂಬದಲ್ಲಿ ಓರ್ವ ಆದಾಯ ತೆರಿಗೆ ಪಾವತಿದಾರ ಎನ್ನುವ ಕಾರಣಕ್ಕೆ ಇಡೀ ಕಾರ್ಡ್ ರದ್ದುಗೊಳಿಸಿ ಅಷ್ಟೇ ತ್ವರಿತವಾಗಿ ಎಪಿಎಲ್ ಕಾರ್ಡ್ ಗೆ ಬದಲಾಯಿಸಿದ್ದು ಮಾತ್ರ ಸರಿಯಲ್ಲ ಎಂಬುದು ನೊಂದವರ ಮಾತಾಗಿದೆ.
ಈ ಎಲ್ಲಾ ಕಾರಣದಿಂದಾಗಿ ಮಾನ್ಯ ಸಿದ್ಧರಾಮಯ್ಯನವರೇ ದಯವಿಟ್ಟು ಒಮ್ಮೆ ಯೋಚನೆ ಮಾಡಿ, ಬಿಪಿಎಲ್ ಕಾರ್ಡ್ ರದ್ದು ಮಾಡಿದ ಕುಟುಂಬದ ಆದಾಯ ತೆರಿಗೆ ಪಾವತಿದಾರ ಸದಸ್ಯನ ಹೆಸರು ಕೈಬಿಟ್ಟು, ಮರಳಿ ನೀಡುವಂತ ಕೆಲಸ ಮಾಡಿ ಎಂಬುದು ಕಾರ್ಡ್ ರದ್ದಾದ ಕುಟುಂಬಸ್ಥರ ವಿನಂತಿಯಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಬಾರಿಗೆ ಅವಕಾಶ ನೀಡಿದರೇ, ಬಿಪಿಎಲ್ ಕಾರ್ಡ್ ರೇಷನ್ ಮೇಲೆಯೇ ಅವಲಂಬಿತವಾಗಿರುವಂತ ಅನೇಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗುತ್ತದೆ. ಆ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯ ಕ್ರಮವಹಿಸಲಿ ಎಂಬುದು ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದುಗೊಂಡಿರುವಂತ ಕುಟುಂಬಸ್ಥರ ಮನವಿಯಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ತಡೆಯಾಜ್ಞೆ ತೆರವಿಗೆ ಪ್ರಯತ್ನ: ಉಪಾಧ್ಯಕ್ಷ ಸುಂದರ್ ಸಿಂಗ್
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?
ಈ ಎರಡು ಎಲೆಗಳು ಮನೆಯಲ್ಲಿದ್ದರೆ ಸಾಕು, ಎಲ್ಲ ದೋಷಗಳು, ದುಷ್ಟಶಕ್ತಿಗಳು ಓಡಿ ಹೋಗುತ್ತವೆ








