ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಮತ್ತು ಕಾಡಿನಂಚಿನ ರೈತರ ಬೆಳೆ ರಕ್ಷಿಸುವ ನಿಟ್ಟಿನಲ್ಲಿ ಆನೆ ಪಥ (ಕಾರಿಡಾರ್), ಆವಾಸಸ್ಥಾನ ರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಸಲು ತೀರ್ಮಾನಿಸಲಾಗಿದ್ದು, ಐಐಎಸ್.ಸಿ.ಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಐ.ಐ.ಎಸ್.ಸಿ.ಯ ಪ್ರೊ. ರಮನ್ ಸುಕುಮಾರ್ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಸಹಿ ಹಾಕಿ ಒಡಂಬಡಿಕೆ ವಿನಿಮಯ ಮಾಡಿಕೊಂಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಮಾತನಾಡಿದ ಅವರು, ಹಾಸನ, ಕೊಡಗು ಭಾಗದಲ್ಲಿ ಹೆಚ್ಚಾಗಿ ಆನೆ-ಮಾನವ ಸಂಘರ್ಷವಿದ್ದು, ಜೀವಹಾನಿ, ಬೆಳೆ ಹಾನಿ ಸಂಭವಿಸುತ್ತಿದೆ ಇದರ ನಿಯಂತ್ರಣಕ್ಕೆ ಎಲ್ಲ ಸಾಧ್ಯ ಕ್ರಮಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದರು.
ಪ್ರಸ್ತುತ ಮಾನವ-ಆನೆ ಸಂಘರ್ಷ ಇತರ ಪ್ರದೇಶಕ್ಕೂ ವಿಸ್ತರಿಸುತ್ತಿದ್ದು, ಪರಿಸರ ಸಂಶೋಧನೆ ಮತ್ತು ಕ್ಷೇತ್ರ ಅನುಷ್ಠಾನವನ್ನು ಸಮನ್ವಯಗೊಳಿಸುವ ಮೂಲಕ, ಆನೆಪಥ, ಆವಾಸಸ್ಥಾನಗಳ ಸಂರಕ್ಷಣೆಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಏಷ್ಯನ್ ಆನೆಗಳ ಭೂಪ್ರದೇಶ ನಿರ್ವಹಣೆ”ಗಾಗಿ ಐದು ವರ್ಷಗಳ ಸಹಯೋಗದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್ ಗಳು ಮತ್ತು ಜಿ.ಐ.ಎಸ್. ಮಾದರಿಗಳನ್ನು ಬಳಸಿಕೊಂಡು ಆನೆ ಕಾರಿಡಾರ್ ಗಳನ್ನು ಗುರುತಿಸುವುದು ಮತ್ತು ಆನೆಗಳ ಸುಗಮ ಸಂಚಾರಕ್ಕೆ ಎದುರಾಗಿರುವ ಅಡೆತಡೆಗಳನ್ನು ಗುರುತಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಆನೆ ಲದ್ದಿಯಲ್ಲಿರುವ ಹಾರ್ಮೋನ್ ಗಳ ಪರೀಕ್ಷೆ ನಡೆಸುವ ಮೂಲಕ ಆನೆಗಳ ದೇಹದ ಸ್ಥಿತಿ ಮತ್ತು ಒತ್ತಡ ಸೂಚಕಗಳನ್ನು ಅಂದಾಜು ಮಾಡಲಾಗುತ್ತದೆ. ಅದೇ ರೀತಿ ಬೆಳೆ ನಾಶದ ಮಾದರಿಗಳ ಅಧ್ಯಯನ, ಸಂಘರ್ಷದ ಹಾದಿ ತುಳಿದ ಆನೆಗಳ ಅಧ್ಯಯನ – ವಿಶ್ಲೇಷಣೆ ಮಾಡಿ ರೈತರಿಗೆ ಅರಿವು ಮೂಡಿಸುವುದೂ ಈ ಯೋಜನೆಯ ಭಾಗವಾಗಿದೆ ಎಂದು ತಿಳಿಸಿದರು.
ಆನೆಗಳು ನಾಡಿನತ್ತ ಬಂದಾಗ ಮುನ್ನೆಚ್ಚರಿಕೆಯ ಗಂಟೆ ಮೊಳಗಿಸುವ ವ್ಯವಸ್ಥೆ ರೂಪಿಸುವ ಹಾಗೂ ಸ್ವಯಂ ಚಾಲಿತ ಧ್ವನಿಯಂತ್ರಗಳ ಮೂಲಕ ಆನೆಗಳನ್ನು ಹಿಮ್ಮೆಟ್ಟಿಸುವ ಬಗ್ಗೆಯೂ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆ ಮತ್ತು ಭಾರತೀಯ ವಿಜ್ಞಾನ ಮಂದಿರದ ತಜ್ಞರು, ಅಧ್ಯಯನಿಗಳು ಆನೆಗಳ ವರ್ತನೆ, ಸ್ವಭಾವದ ದತ್ತಾಂಶ ಕ್ರೋಡೀಕರಿಸಿ ಆನೆಪಥ (ಕಾರಿಡಾರ್) ಹಾಗೂ ಮುಂದಿನ 10 ವರ್ಷಗಳಲ್ಲಿ ಎದುರಾಗಬಹುದಾದ ಭವಿಷ್ಯದ ಸಂಘರ್ಷ ಪ್ರದೇಶ ಗುರುತಿಸಲೂ ಈ ಅಧ್ಯಯನ ನೆರವಾಗಲಿದೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಅಧ್ಯಯನ:
ಮೈಸೂರು ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪ್ರಮುಖ ಅರಣ್ಯ ವಿಭಾಗಗಳು ಹಾಗೂ ಸಂರಕ್ಷಿತ ಪ್ರದೇಶಗಳು ಅಂದರೆ ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಹಾಗೂ ಮಾನವ ವಾಸವಿರುವ ಕೃಷಿ ಪ್ರದೇಶಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಸಂಶೋಧನಾ ಚಟುವಟಿಕೆಗಳನ್ನು ಭಾರತೀಯ ವಿಜ್ಞಾನ ಮಂದಿರದ (IISc) ಪರಿಸರ ಶಾಸ್ತ್ರ ಕೇಂದ್ರ (Centre for Ecological Sciences) ಹಾಗೂ ಏಷಿಯನ್ ನೇಚರ್ ಕನ್ಸರ್ವೇಷನ್ ಫೌಂಡೇಶನ್, ಫೌಂಡೇಶನ್ ಫಾರ್ ಇಕಲಾಜಿಕಲ್ ರಿಸರ್ಚ್, ಅಡ್ವಕಸಿ ಅಂಡ್ ಲರ್ನಿಂಗ್, ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಹಯೋಗದಲ್ಲಿ ನಡೆಸಲುದ್ದೇಶಿಸಲಾಗಿದೆ ಎಂದು ವಿವರಿಸಿದರು.
ಸ್ಥಳಾಂತರಗೊಂಡ ಆನೆಗಳಿಗಾಗಿ ಮೃದು ಬಿಡುಗಡೆ ಶಿಷ್ಟಾಚಾರ, ಝ್ಯಾಪ್ ಕಾಲರ್ ಗಳು, ಬಜರ್ ಗಳು ಮತ್ತು ಸಮುದಾಯ ಬೆಂಬಲಿತ ಬೇಲಿಗಳಂತಹ ನವೀನ ಉಪಕರಣಗಳ ಅಭಿವೃದ್ಧಿಗೂ ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪ್ರೊ. ರಮನ್ ಸುಕುಮಾರ್ ಮಾತನಾಡಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ನಾವು ಕಾರಣಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ, ಈ ನಿಟ್ಟಿನಲ್ಲಿ ಈ ಒಡಂಬಡಿಕೆ ಮಹತ್ವಪೂರ್ಣವಾದುದಾಗಿದೆ ಎಂದರು.
ಈ ಅಧ್ಯಯನದಿಂದ ಅಥವಾ ಯೋಜನೆಯ ಅನುಷ್ಠಾನದಿಂದ ಸಂಪೂರ್ಣವಾಗಿ ಮಾನವ-ಆನೆ ಸಂಘರ್ಷ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಪರಿಣಾಮಕಾರಿಯಾಗಿ ಸಂಘರ್ಷ ತಗ್ಗಿಸಬಹುದಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರರು ಉಪಸ್ಥಿತರಿದ್ದರು.
• ಯೋಜನೆಯ ಅವಧಿ: 2025–2029 (5 ವರ್ಷ)
• ಆರ್ಥಿಕ ವೆಚ್ಚ: ₹4.74 ಕೋಟಿ (ಕರ್ನಾಟಕ ಅರಣ್ಯ ಇಲಾಖೆಯ ನೆರವು)
• ಮೌಲ್ಯಮಾಪನ: ವರ್ಷಕ್ಕೆ ಎರಡು ಬಾರಿ ಪರಿಶೀಲನಾ ಸಭೆಗಳು, ವಾರ್ಷಿಕ ವರದಿಗಳು, ಮತ್ತು ಸಕಾಲಿಕ ದತ್ತಾಂಶದ ಡ್ಯಾಶ್ ಬೋರ್ಡ್ ನಿರ್ವಹಣೆ.
ಇಂದಿನಿಂದ ರೈಲ್ವೆ ಹೊಸ ನಿಯಮ ಜಾರಿ: ‘ತತ್ಕಾಲ್ ಟಿಕೆಟ್ ಬುಕಿಂಗ್’ಗೆ ಆಧಾರ್ ಒಟಿಪಿ ಕಡ್ಡಾಯ
BREAKING: ಬಾಲಿವುಡ್ ನ ಹಿರಿಯ ನಟ ಧೀರಜ್ ಕುಮಾರ್ ನಿಧನ | Dheeraj Kumar passes away