ಚಾಮರಾಜನಗರ : ವೀರಪ್ಪನ್ ಇದ್ದಾಗಲೇ ಕಾಡು ಚನ್ನಾಗಿತ್ತು. ಅಧಿಕಾರಿಗಳಿಗಿಂತ ವೀರಪ್ಪನ್ ವಾಸಿ ಎಂದು ರೈತರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪ್ರಾಣಿ-ಮಾನವ ಸಂಘರ್ಷ ಸಂಬಂಧಿತ ಸಮಸ್ಯೆಗಳು, ಪರಿಹಾರೋಪಾಯಗಳ ಬಗೆಗಿನ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಕಷ್ಟು ಅಕ್ರಮ ರೆಸಾರ್ಟ್ ಗಳಿವೆ. ವೀರಪ್ಪನ್ ಇದ್ದಾಗಲೇ ಕಾಡು ಚೆನ್ನಾಗಿತ್ತು. ಅಕ್ರಮ ಗಣಿಗಾರಿಕೆ, ರೆಸಾರ್ಟ್ ಗಳು ಇರಲಿಲ್ಲ. ಅಧಿಕಾರಿಗಳಿಗಿಂತ ವೀರಪ್ಪನ್ ವಾಸಿ ಎಂದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಹಾಗೂ ಸಾರ್ವಜನಿಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಹೋಂಸ್ಟೇ, ರೆಸಾರ್ಟ್ ನಡೆಯುತ್ತಿದ್ದರೆ ಸ್ಪಷ್ಟ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವ ಭರವಸೆ ನೀಡಿದರು.
ಮಾನವ ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ ನೂರಾರು, ಸಾವಿರಾರು ವರ್ಷದಿಂದ ಇದೆ. ಈಗ ವನ್ಯಜೀವಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಇದರಿಂದ ಸಂಘರ್ಷ ಹೆಚ್ಚಳವಾಗುತ್ತಿದ್ದು, ಸ್ಥಳೀಯರ, ಸಾರ್ವಜನಿಕರ, ರೈತರ ಸಲಹೆ, ಅಭಿಪ್ರಾಯ ಪಡೆದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಸಭೆ ನಡೆಸಲಾಗಿದೆ ಎಂದರು.
ಈಗಾಗಲೇ ಇಲಾಖೆಯ ವತಿಯಿಂದ 2 ತಜ್ಞರ ಸಮಿತಿ ರಚಿಸಲಾಗಿದ್ದು, ವನ್ಯಜೀವಿಗಳು ನಾಡಿಗೆ ಬರುತ್ತಿರುವ ಬಗ್ಗೆ ಅಧ್ಯಯನ ಮಾಡಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಇದರ ಜೊತೆಗೆ ಇಂದಿನ ಸಭೆಯಲ್ಲಿ ರೈತರು, ಸಾರ್ವಜನಿಕರು ನೀಡಿರುವ ಎಲ್ಲ ಸಲಹೆ ಕ್ರೋಡೀಕರಿಸಿ, ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ವನ್ಯಜೀವಿಯಿಂದ ಬೆಳೆ ಹಾನಿ. ಜಾನುವಾರಗಳ ಹಾನಿ ಆದಾಗ ಪರಿಹಾರ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು. ಇಂದು 153ಕ್ಕೂ ಹೆಚ್ಚು ಹುಲಿಗಳಿವೆ. ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ. ಹುಲಿಗಳಿಗೆ ಅರಣ್ಯ ಪ್ರದೇಶ ಕಡಿಮೆ ಆಗಿರುವುದರಿಂದ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ವನ್ಯಜೀವಿಗಳ ದಾಳಿಗೆ ಸರಾಸರಿ 55-60 ಜನರು ಸಾವಿಗೀಡಾಗುತ್ತಿದ್ದಾರೆ. 2021-22ರ ಸಾಲಿನಲ್ಲಿ 41 ಜನರು ಮೃತಪಟ್ಟಿದ್ದರು. ಈ ಪೈಕಿ ಆನೆ ದಾಳಿಯಿಂದ 28, ಹುಲಿ ದಾಳಿಯಿಂದ ಇಬ್ಬರು ಮತ್ತು ಇತರ ಪ್ರಾಣಿಗಳ ದಾಳಿಯಿಂದ 11 ಜನರು ಮೃತಪಟ್ಟಿದ್ದರು. 2022-23ನೇ ಸಾಲಿನಲ್ಲಿ 57 ಜನರು ವನ್ಯಜೀವಿ ದಾಳಿಯಿಂದ ಸಾವಿಗೀಡಾಗಿದ್ದಾರೆ. ಆನೆ ದಾಳಿಗೆ 32 ಜನರು ಮೃತಪಟ್ಟಿದ್ದರೆ, ಹುಲಿ ದಾಳಿಯಿಂದ 5 ಜನರು ಅಸುನೀಗಿದ್ದರು. 2023-24ನೇ ಸಾಲಿನಲ್ಲಿ ಒಟ್ಟು 65 ಜನರು ಮೃತಪಟ್ಟಿದ್ದರು ಈ ಪೈಕಿ ಆನೆ ದಾಳಿಯಿಂದ 48, ಹುಲಿ ದಾಳಿಯಿಂದ 5 ಜನರು ಮೃತಪಟ್ಟಿದ್ದರು. 2024-25ನೇ ಸಾಲಿನಲ್ಲಿ 46 ಜನರು ಸಾವಿಗೀಡಾಗಿದ್ದು, ಆನೆ ದಾಳಿಯಿಂದ 36 ಜನರು ಹುಲಿ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಈ ಸಾಲಿನಲ್ಲಿ ಅಂದರೆ 2025-26ರಲ್ಲಿ ಈವರೆಗೆ 30 ಜನರು ವನ್ಯಜೀವಿ ದಾಳಿಗೆ ಬಲಿಯಾಗಿದ್ದಾರೆ. ಈ ಪೈಕಿ 20 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದರೆ, 4 ಜನರು ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ವಿವರ ನೀಡಿದರು.
ಆಧುನಿಕ ತಂತ್ರಜ್ಞಾನ ಬಳಕೆಗೆ ಸೂಚನೆ :
ಸಾವಿರಾರು ಚದರ ಕಿಲೋ ಮೀಟರ್ ಅರಣ್ಯದ ಸಂಪೂರ್ಣ ಗಸ್ತು ಸಾಧ್ಯವಿಲ್ಲ. ಹೀಗಾಗಿ ಆಧುನಿಕ ತಂತ್ರಜ್ಞಾನ ಬಳಸಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ವನ್ಯಜೀವಿಗಳನ್ನು ಮರಳಿ ಕಾಡಿಗೆ ಕಳಿಸಲು ಸಮಗ್ರ ಕಮಾಂಡ್ ಕೇಂದ್ರ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕೂರದೆ, ಸಂಘರ್ಷ ಇರುವ ಗ್ರಾಮಗಳಿಗೆ ತೆರಳಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಮಸ್ಯೆ ಪರಿಹರಿಸಬೇಕು ಮತ್ತು ಅರಣ್ಯಾಧಿಕಾರಿಗಳು ಫೋನ್ ಬಂದ್ ಮಾಡದೆ ಜನರಿಗೆ ಸ್ಪಂದಿಸುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಹುಲಿ ಸೆರೆ, ಆನೆ ಸೆರೆ ಕಾರ್ಯಾಚರಣೆ ಮಾಡುವಾಗ ಪ್ರಮಾಣಿತ ಮಾನದಂಡ ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಜೊತೆಗೆ ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಲಾಗುವುದು ಎಂದರು.
ಪ್ರಸ್ತುತ ಪಶು ಸಂಗೋಪನಾ ಇಲಾಖೆಯಿಂದ ಪಶುವೈದ್ಯರ ಎರವಲು ಸೇವೆ ಪಡೆಯಲಾಗುತ್ತಿದೆ. ಹೀಗಾಗಿ ವನ್ಯಜೀವಿ ವೈದ್ಯರ ಕೇಡರ್ ಸೃಷ್ಟಿಸಿ ನೇರ ನೇಮಕಾತಿ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಬಂಡೀಪುರದಲ್ಲಿ ಕೊನೆಯ ಸಫಾರಿ ಟ್ರಿಪ್ ಕಡಿತ ಮಾಡಿದ್ದು, ಸಫಾರಿಯಿಂದ ವನ್ಯಜೀವಿಗಳು ನಾಡಿಗೆ ಬರುತ್ತಿದ್ದರೆ ಸಫಾರಿಗೆ ಇನ್ನೂ ಹೆಚ್ಚಿನ ಅಂಕುಶ ಹಾಕಲಾಗುವುದು ಎಂದು ತಿಳಿಸಿದರು.
ಅರಣ್ಯ ಪ್ರದೇಶದ ಅಂಚಿನಲ್ಲಿ ಮತ್ತು ಒಳಗಿರುವ ವಸತಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿನ ಸಂಪರ್ಕ ಇಲ್ಲ ಎಂದು ತಿಳಿಸಿದ್ದೀರಿ. ಮೂಲಸೌಕರ್ಯ ಒದಗಿಸಲು ಯಾವುದೇ ತೊಂದರೆ ನೀಡದಂತೆ ನಿಯಮಾನುಸಾರ ಅನುಮತಿ ನೀಡಲು ಸೂಚಿಸಲಾಗುವುದು, ಈಗಾಗಲೇ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ವಸತಿ ಪ್ರದೇಶಕ್ಕೆ ವಿದ್ಯುತ್ ನೀರು ಸಂಪರ್ಕ ನೀಡಲು ಕೋರಿ ಕೇಂದ್ರ ಹವಾಮಾನ ಬದಲಾವಣೆ ಮತ್ತು ಅರಣ್ಯ ಸಚಿವಾಲಯಕ್ಕೆ ಹಾಗೂ ಎನ್.ಟಿ.ಸಿ.ಎ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವೊಂದು ಪ್ರಸ್ತಾವನೆಗಳನ್ನು ಕೇಂದ್ರ ತಿರಸ್ಕರಿಸಿದೆ ಎಂದರು.
ಹಿರಿಯ ಅರಣ್ಯಾಧಿಕಾರಿಗಳನ್ನು ಕೇಂದ್ರ ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಪಡೆದುಕೊಂಡು ಬರಲು ಸೂಚಿಸಲಾಗುವುದು ಎಂದೂ ತಿಳಿಸಿದರು.
ಪ್ರತಿಯೊಂದು ಜೀವವೂ ಅಮೂಲ್ಯ. ಒಬ್ಬರೂ ಸಾವಿಗೀಡಾಗಬಾರದು ಎಂಬುದು ಸರ್ಕಾರ ನಿಲುವಾಗಿದೆ. ಆದರೂ ನಮ್ಮ ಕೈ ಮೀರಿ ಇಂತಹ ಘಟನೆಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ನಿಯಂತ್ರಣ ಕಾರ್ಯಪಡೆ ರಚಿಸಲಾಗುತ್ತಿದೆ. ಇದರಲ್ಲಿ ಸ್ಥಳೀಯರನ್ನೂ ಸೇರಿಸಲಾಗುವುದು ಎಂದು ವಿವರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕರುಗಳಾದ ಗಣೇಶ್ ಪ್ರಸಾದ್, ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವ ನಾರಾಯಣ್, ಪುಟ್ಟರಂಗಶೆಟ್ಟಿ, ಎಂ.ಎಲ್.ಸಿ. ಮಂಜೇಗೌಡ, ಚಾಮರಾಜ ನಗರ ಜಿಲ್ಲಾಧಿಕಾರಿ ಶಿಲ್ಪನಾಗ್, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಪಿಸಿಸಿಎಫ್ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.








