ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇನ್ನೂ ಮುಗಿದಿಲ್ಲ ಎಂದು ರಾಜ್ಯದ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರೆಲ್ಲರೂ ಒಂದು ನಿರ್ಧಾರಕ್ಕೆ ಬಂದು ಬಹಳ ಸಮೀಪಕ್ಕೆ ತಲುಪಿದ್ದಾರೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಹೋದ ಎಂ.ಬಿ. ಪಾಟೀಲರಿಗೆ ಯಾವ ನೈತಿಕತೆ ಇದೆ?” ಎಂಬ ವಿಜಯೇಂದ್ರ ಅವರ ಹೇಳಿಕೆಗೆ ಪಾಟೀಲ್ ತಿರುಗೇಟು ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲೇ ‘ಸ್ವತಂತ್ರ ಧರ್ಮ’ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಅವರು ನೆನಪಿಸಿದರು.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡುವ ಹೋರಾಟ ಇನ್ನೂ ಚಾಲನೆಯಲ್ಲಿದೆ ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವೀರಶೈವ-ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ ಎಂಬ ವಾದವನ್ನು ಅವರು ಪುನರುಚ್ಚರಿಸಿದ್ದಾರೆ.
ವಿಜಯೇಂದ್ರ ಅವರಿಗೆ ಸವಾಲು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಧೈರ್ಯವಿದ್ದರೆ “ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗ” ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.








