ಬೆಂಗಳೂರು : ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಪ್ರವೇಶ ದರವನ್ನು 200 ರೂಪಾಯಿ ನಿಗದಿಪಡಿಸಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಗೃಹ ಕಚೇರಿ ಕೃಷ್ಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿ,ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರವನ್ನು ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿದೆ. ರೂ.200 ಮೀರದಂತೆ ಪ್ರವೇಶದರ ವಿಧಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಇತ್ತೀಚೆಗೆ ವಾಣಿಜ್ಯ ಮಂಡಳಿಯ ಮುಂಭಾಗದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ದುಬಾರಿ ಪ್ರವೇಶ ದರದಿಂದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ಸಹ ವಾಪಸ್ ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಕೂಡಲೇ 200 ರೂ.ಗೆ ಮೀರದಂತೆ ಪ್ರವೇಶದರ ನಿಗದಿಪಡಿಸಲು ಕೋರಿದ್ದೇವೆ. ಇನ್ನು 10 ದಿನ ಕಾಯಿರಿ ಈ ಸಂಬಂಧ ಕ್ರಮ ತೆಗದುಕೊಳ್ಳಲಾಗುವುದು ಎಂದರು.
ಇದೆ ವೇಳೆ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ, ಈಗಾಗಲೇ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರಿಂದ 200 ರೂ. ಪ್ರವೇಶದರ ನಿಗದಿಪಡಿಸಿರುವಂತೆ ನಮ್ಮಲ್ಲೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಗಳಲ್ಲಿ ರೂ. 150-200ಗೆ ಮೀರದಂತೆ ಪ್ರವೇಶದರ ನಿಗದಿಪಡಿಸುವಂತೆ ಸರ್ಕಾರಿ ಆದೇಶ ಹೊರಡಿಸುವಂತೆ ಮನವಿ ಪತ್ರ ನೀಡಿದ್ದೇವೆ ಎಂದು ತಿಳಿಸಿದರು.