ದಕ್ಷಿಣಕನ್ನಡ : ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಯಾವುದೇ ವ್ಯಕ್ತಿ ಇರಲಿ ಕೋರ್ಟ್ ದಂಡ ವಿಧಿಸುತ್ತೆ. ಆದರೆ ದಕ್ಷಿಣ ಕನ್ನಡದಲ್ಲಿ ಕೋರ್ಟ್ ಅಚ್ಚರಿಯ ಶಿಕ್ಷೆ ನೀಡಿದ್ದು ಯುವಕನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ನೆಲೆಯಲ್ಲಿ ಆತನಿಗೆ ಕೋರ್ಟ್ ಸಾರ್ವಜನಿಕ ಸ್ಥಳದಲ್ಲಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷೆ ವಿಧಿಸಿದೆ.
ಹೌದು ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬವರು ಸುಳ್ಯ ಪೇಟೆಯಲ್ಲಿ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ. ಈ ಹಿನ್ನೆಲೆಯಲ್ಲಿ, ಸುಳ್ಯ ಪೊಲೀಸ್ ಠಾಣೆಯಲ್ಲಿ ಐಎಂವಿ ಕಾಯ್ದೆಯ ಕಲಂ 119 R/w 177, 184 ಹಾಗೂ 194(C) ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಸಂಬಂಧ ಸುಳ್ಯ ಠಾಣೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ಸುಳ್ಯ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂ. ದಂಡ ವಿಧಿಸಿದೆ. ಅಲ್ಲದೇ, ನ್ಯಾಯಾಲಯವು ಆರೋಪಿಗೆ ಮೂರೂ ಪ್ರಕರಣಗಳಲ್ಲಿಯೂ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ ಸಮುದಾಯ ಸೇವೆ ಸಲ್ಲಿಸುವಂತೆ ಆದೇಶಿಸಿದೆ. ಅದರಂತೆ, ಯುವಕ ಮಾರ್ಚ್ 15ರಿಂದ 29ರವರೆಗೆ ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಹಿಡಿದು ನಿಂತು ಸಾರ್ವಜನಿಕರಲ್ಲಿ ಸಂಚಾರ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ.
ಜೊತೆಗೆ, ಆರೋಪಿಯ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ನ್ಯಾಯಾಲಯ ಆದೇಶ ಹೊರಡಿಸಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೀಡಿರುವ ಈ ರೀತಿಯ ಶಿಕ್ಷೆ ಎಲ್ಲರ ಗಮನ ಸೆಳೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋರ್ಟ್ ಆದೇಶದ ಪ್ರಕಾರ ಯುವಕ ಸಂಚಾರ ನಿಯಮ ಪಾಲಿಸುವಂತೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾನೆ.








