ಬೆಂಗಳೂರು: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಮತ್ತು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ‘ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) ಕಾಯ್ದೆ’ಯನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಕಾಯ್ದೆ ಅನ್ವಯವಾಗಲಿದೆ.ಜಾತಿ ತಾರತಮ್ಯ ಎಸಗುವುದು ಜಾಮೀನು ರಹಿತ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.
ತಾರತಮ್ಯದ ವ್ಯಾಖ್ಯಾನ: ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ಎಂಬ ಕಾರಣಕ್ಕೆ ಲಿಖಿತ ಅಥವಾ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಅಂಕ ನೀಡುವುದನ್ನು ಜಾತಿ ತಾರತಮ್ಯ ಎಂದು ಪರಿಗಣಿಸಲಾಗುತ್ತದೆ.
ಕಾಯ್ದೆಯಡಿ ನಿಷೇಧಿಸಲಾದ ತಾರತಮ್ಯದ ಕ್ರಮಗಳು:
ದಾಖಲಾತಿ ಅಥವಾ ಸಂದರ್ಶನದ ವೇಳೆ ವಿದ್ಯಾರ್ಥಿಯ ಸಾಮಾಜಿಕ ಹಿನ್ನೆಲೆ ಅಥವಾ ಕುಟುಂಬದ ವೃತ್ತಿ ಬಗ್ಗೆ ಪ್ರಶ್ನಿಸುವುದು.
ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕುಳ್ಳಿರಿಸುವುದು ಅಥವಾ ಜಾತಿ ಬಗ್ಗೆ ಕೀಳಾಗಿ ಮಾತನಾಡುವುದು.
ಪ್ರಯೋಗಾಲಯಗಳಲ್ಲಿ ಪ್ರಯೋಗಗಳನ್ನು ಮಾಡಲು ಅನುಮತಿ ನಿರಾಕರಿಸುವುದು.
ಉತ್ತಮ ಸಾಧನೆ ಮಾಡಿದರೂ ವೈವಾ ಅಥವಾ ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ಕಡಿಮೆ ಅಂಕ ನೀಡುವುದು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೇಣಿಗೆ ನೀಡುವಂತೆ ಒತ್ತಾಯಿಸಿ ಅವಮಾನಿಸುವುದು.
ಹಿನ್ನೆಲೆ:
ಈ ಹಿಂದೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂತಹದೊಂದು ಕಾಯ್ದೆಯ ಅಗತ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಕಾನೂನು ಮತ್ತು ಗೃಹ ಇಲಾಖೆಗಳು ಸಕಾರಾತ್ಮಕ ಅಭಿಪ್ರಾಯ ನೀಡಿದ ಹಿನ್ನೆಲೆಯಲ್ಲಿ ಈಗ ಸಚಿವ ಸಂಪುಟವು ಇದಕ್ಕೆ ಹಸಿರು ನಿಶಾನೆ ತೋರಿಸಿದೆ.
ಯಾವುದೇ ದೂರು ದಾಖಲಾದಲ್ಲಿ ಸಮಾನತೆ ಸಮಿತಿ (ಈಕ್ವಿಟಿ ಕಮಿಟಿ) ರಚಿಸಿ ಪರಿಶೀಲನೆ ನಡೆಸಬೇಕು ಮತ್ತು 30 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.








