ಬೆಂಗಳೂರು : ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ಗೆ ಚಿನ್ನಯ್ಯನ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ 05-05-2025 ರಂದು ವಜಾಗೊಂಡಿದ್ದರೂ ಸಹ, ಅದನ್ನು ಮುಚ್ಚಿಟ್ಟು ಎಸ್‌ಐಟಿ ರಚನೆ ಆಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ ಬುರುಡೆ ಗ್ಯಾಂಗ್ ನ ಷಡ್ಯಂತ್ರ ಬಟಾ ಬಯಲಾಗಿದೆ. 2025 ಮೇ 5 ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ವಕೀಲರಾದ ಕೆ.ವಿ. ಧನಂಜಯ್ ಹಾಗೂ ಅವರ ವಕೀಲರ ತಂಡದ ಮೂಲಕ ಚಿನ್ನಯ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು.
ಆ ಪಿಐಎಲ್ ಅರ್ಜಿ ಮಾನ್ಯ ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಸತೀಶ್ ಚಂದ್ರ ಶರ್ಮ ಅವರ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ 1995 ರಿಂದ 2004 ರ ವರೆಗೆ ನಡೆದ ಘಟನೆಗಳ ಬಗ್ಗೆ 20 ವರ್ಷಗಳ ನಂತರ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಧೀರ್ಘಕಾಲೀನ ವಿಳಂಬಕ್ಕೆ ಯಾವುದೇ ಸಕಾರಣಗಳನ್ನು ನೀಡಲಾಗಿಲ್ಲ. ಈ ಸಾರ್ವಜನಿಕ ಹಿತಾಸಕ್ತಿಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ವ್ಯವಸ್ಥೆಯ ವಿರುದ್ಧ ಮಾಡಲಾದ ಸುಳ್ಳು ಆಪಾದನೆ ಎಂದು ಹೇಳಿದೆ. ಮಾತ್ರವಲ್ಲದೇ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಖಾಂತರ ಸುಳ್ಳು ಸಾಧನೆ ಮಾಡಲು ಹೊರಟಿರುವುದು, ಆದ್ದರಿಂದ ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಇದು “Publicity Interest,” “Paisa Interest,” “Private Interest,” “Political Interest Litigation” ಅರ್ಜಿ ಆಗಿದ್ದು, ಮಾನ್ಯ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಮುಚ್ಚಿಟ್ಟು, ಜುಲೈ ತಿಂಗಳಲ್ಲಿ ಚಿನ್ನಯ್ಯನ ಮೂಲಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಲಾಗಿದ್ದು, ನಂತರದ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವಾಗಿ ರೂಪು ಪಡೆಯಿತು. ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡುವ ಹಂತದವರೆಗೆ ತಲುಪಿದ್ದು, ಎಸ್‌ಐಟಿ ರಚನೆಯಾಯಿತು.
ಎಸ್‌ಐಟಿ ತನಿಖೆ ನಡೆಯುತ್ತಿರುವ ಹಂತದಲ್ಲಿಯೇ, ಪುರಂದರ ಗೌಡ ಹಾಗೂ ತುಕಾರಾಂ ಗೌಡ ಎಂಬ ಇಬ್ಬರು ವ್ಯಕ್ತಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿ, ಚಿನ್ನಯ್ಯ ನೀಡಿದ ದಾಖಲೆ ಹಾಗೂ ಹೇಳಿಕೆ ಆಧರಿಸಿ ಇನ್ನಷ್ಟು ವಿಚಾರಗಳು ನಮಗೆ ತಿಳಿದಿವೆ. ಈ ವಿಚಾರಗಳನ್ನು ಎಸ್‌ಐಟಿ ತನಿಖೆ ನಡೆಸಬೇಕು ಎಂದು ಅರ್ಜಿ ಹಾಕಿರುವುದು ಗಮನಾರ್ಹವಾಗಿದೆ. ತುಕಾರಾಂ ಗೌಡ ಮತ್ತು ಪುರಂದರ ಗೌಡ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಮಾನ್ಯ ಕರ್ನಾಟಕ ಹೈಕೋರ್ಟ್ ಪ್ರಕರಣದ ತನಿಖೆ ಬಗ್ಗೆ ವರದಿ ನೀಡುವಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಸೂಚನೆ ನೀಡಿತ್ತು.
ಈ ಹಿನ್ನಲೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಚಿನ್ನಯ್ಯ ನೀಡಿರುವ ದೂರು ಸುಳ್ಳಿನಿಂದ ಕೂಡಿದೆ, ಆತ ತೋರಿಸಿದ್ದ 13 ಸ್ಥಳಗಳಲ್ಲಿ ಉತ್ಖನನ ಮಾಡಲಾಗಿದ್ದು, ಒಂದು ಸ್ಥಳದಲ್ಲಿ ಸಿಕ್ಕ ಅಸ್ತಿಪಂಜರ ಗಂಡಸಿನದ್ದಾಗಿದೆ ಎಂದು ಮಾನ್ಯ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇನ್ನು ಸುಜಾತಾ ಭಟ್ ಎಂಬ ಮಹಿಳೆ ನೀಡಿದ ದೂರಿನ ಬಗ್ಗೆಯೂ ಉಲ್ಲೇಖ ಮಾಡಿದ ವಿಶೇಷ ಸರ್ಕಾರಿ ಅಭಿಯೋಜಕರು, ಅನನ್ಯ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಳ್ಳಾಗಿದ್ದು, ಆ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ, ಧರ್ಮಸ್ಥಳಕ್ಕೆ ಸಂಬಂಧಿಸಿದ ಪ್ರಕರಣವಲ್ಲ ಎಂದು ತಿಳಿಸಿದರು.
ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಭಾಗವಾಗಿ ಮಾನ್ಯ ಸುಪ್ರೀಂ ಕೋರ್ಟ್‌ನಲ್ಲಿ ಚಿನ್ನಯ್ಯ ಸಲ್ಲಿಸಿದ ಅರ್ಜಿ ವಜಾಗೊಂಡಿದ್ದರೂ ಸಹ, ಅದನ್ನು ಮರೆಮಾಚಿ ಷಡ್ಯಂತ್ರ ಮುಂದುವರೆಸಿ, ನ್ಯಾಯಾಲಯದ ದಿಕ್ಕು ತಪ್ಪಿಸಿ, ಸರ್ಕಾರಕ್ಕೆ ಒತ್ತಡ ಹೇರಿ, ಬುರುಡೆ ಗ್ಯಾಂಗ್ ಎಸ್‌ಐಟಿ ರಚನೆ ಮಾಡಿಸಿಕೊಳ್ಳಲು ಯಶಸ್ವಿಯಾಯಿತು. ಆದರೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ, ಈ ಬುರುಡೆ ಗ್ಯಾಂಗಿನ ಷಡ್ಯಂತ್ರವನ್ನು ಬಯಲಿಗೆಳೆದಿದೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ, ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಸದಸ್ಯರು, ಸಂಸ್ಥೆಗಳಿಗೆ ಹಾಗೂ ಜನರ ಭಾವನೆಗಳಿಗೆ ಕಳಂಕ ತರುವ ಪ್ರಯತ್ನ ಬುರುಡೆ ಗ್ಯಾಂಗ್‌ನದ್ದಾಗಿದೆ.