ರಾಯಚೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ” ಭಾರತ್ ಜೋಡೋ ಯಾತ್ರೆ ” ನಡೆಯುತ್ತಿದ್ದು, ಪಾದಯಾತ್ರೆಯಲ್ಲಿ ದೇಶದಲ್ಲೇ ಅತಿದೊಡ್ಡ ಗಡ್ಡ ಹೊಂದಿದ ‘ಬಿಯರ್ಡ್ ಮ್ಯಾನ್’ ಎಲ್ಲರ ಗಮನ ಹರಿಸಿದ್ದಾರೆ.
ಹೆಸರು ಪ್ರವೀಣ್ ಪರಮೇಶ್ವರ್. ಕೇರಳದ ಕೊಚ್ಚಿ ನಿವಾಸಿ. ವಯಸ್ಸು 38. ಭಾರತ್ ಜೋಡೋದಲ್ಲಿ ಹೆಜ್ಜೆ ಹಾಕುತ್ತಿರುವ ಈ ವ್ಯಕ್ತಿಯ ವಿಶೇಷ ಏನಪ್ಪಾ? ಅಂತೀರಾ, ಅಂದಹಾಗೆ ಇವರದ್ದು ದೇಶದಲ್ಲಿ ಅತಿ ಉದ್ದನೆಯ ಗಡ್ಡ, ಅಂದರೆ ಬರೋಬ್ಬರಿ 40 ಇಂಚು. ಭಾರತ್ ಜೋಡೋ ಪಾದಯಾತ್ರೆಯಲ್ಲಿ ‘ಬಿಯರ್ಡ್ ಮ್ಯಾನ್’ ಎಂದೇ ಗುರುತಿಸುತ್ತಿದ್ದಾರೆ.
ಪ್ರವೀಣ್ ಮೂಲತಃ ಟೆಕ್ಕಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಟೆಕ್ಕಿ ಕೆಲಸ ತೊರೆದು ಸಿನಿಮಾ ಕ್ಷೇತ್ರಕ್ಕೆ ಮುಖಮಾಡಿದರು. ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಪ್ರವೀಣ್ ಗಡ್ಡ ಬೆಳೆಸುತ್ತಿದ್ದಾರೆ. ಭಾರತದಲ್ಲಿ ಅತ್ಯಂತ ಉದ್ದನೆಯ ಗಡ್ಡ ಹೊಂದುವ ಮೂಲಕ ದಾಖಲೆ ಬರೆದಿರುವ ಪ್ರವೀಣ್, ಪ್ರಪಂಚದಲ್ಲಿ ಎರಡನೇ ಅತೀ ಉದ್ದನೆಯ ಗಡ್ಡ ಹೊಂದಿರುವ ವ್ಯಕ್ತಿ ಎಂಬುದು ಕೂಡಾ ವಿಶೇಷ. ವಿವಿಧ ದೇಶಗಳ 115 ಜನರು ಭಾಗಿಯಾಗಿದ್ದ ಸ್ಪರ್ಧೆಯಲ್ಲಿ ಪ್ರವೀಣ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದೀಗ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪ್ರವೀಣ್ ಹೆಜ್ಜೆ ಹಾಕುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯ ಉದ್ದೇಶ ಅರಿತುಕೊಂಡು ಈ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದೇನೆ. ಕಾಶ್ಮೀರದ ವರೆಗೂ ಪಾದಯಾತ್ರೆಯಲ್ಲಿ ಭಾಗಿಯಾಗುವ ಉದ್ದೇಶ ಇದೆ ಎಂದರು.ನಾನು ರಾಹುಲ್ ಗಾಂಧಿ ಅಭಿಮಾನಿಯಾಗಿದ್ದೇನೆ.
ಭಾರತ್ ಜೋಡೋ ಪಾದಯಾತ್ರೆ ನನಗೆ ಹಲವು ಅನುಭವ ನೀಡಿದೆ. ದೇಶವನ್ನು ಅರಿಯಲು ಇದೊಂದು ಉತ್ತಮ ಅವಕಾಶ ಎಂದರು. ಯಾತ್ರೆಯಲ್ಲಿ ವಿಭಿನ್ನ ಸಂಸ್ಕೃತಿ, ಜನರು ಸಿಗುತ್ತಾರೆ. ಇದೊಂದು ಐತಿಹಾಸಿಕ ಯಾತ್ರೆ ಎಂದರು.