ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕೆಂಡ’ ಚಿತ್ರದ ಕಡೆಯಿಂದ ಹಂತ ಹಂತವಾಗಿ ಚಿತ್ರದ ಬಗೆಗಿನ ಹಲವು ಅಪ್‌ಡೇಟ್‌ಗಳ ಬಗ್ಗೆ ನಮಗೆ ತಿಳಿಯುತ್ತಲೇ ಬರುತ್ತಿವೆ.
ಈ ನಡುವೆ ಇದೀಗ ಕೆಂಡದ ಆಡಿಯೋ ಹಕ್ಕುಗಳ ವಿಚಾರದಲ್ಲಿ ಖುಷಿಯ ಸಂಗತಿಯೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾ `ಕೆಂಡ’. ಇದರ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಸಂಗೀತ ನೀಡಿರುವ ಹಾಡಿಗಳ ಆಡಿಯೋ ರೈಟ್ಸ್ ಅನ್ನು ಡಿ ಬೀಟ್ಸ್ ಪಡೆದುಕೊಂಡಿದೆ. ಸಿನಿಮಾ ಮ್ಯೂಸಿಕ್ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ಡಿ ಬೀಟ್ಸ್. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಅವರೇ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಹರಿಕೃಷ್ಣ ಅವರ ಕಡೆಯಿಂದ ಬಂದಿರುವ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ. ಎಲ್ಲ ರೀತಿಯಿಂದಲೂ ಈ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ ಎಂಬ ಅಭಿಪ್ರಾಯ ಹರಿಕೃಷ್ಣ ಅವರು ಹೇಳಿದ್ದಾರೆ.
ಇದಲ್ಲದೇ ಕೆಂಡ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಅದರಲ್ಲೊಂದು ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿರೋದು ವಿಶೇಷ. ಅದಿತಿ ಸಾಗರ್ ಕೂಡಾ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸದ್ಯಕ್ಕೆ ಇವಿಷ್ಟು ಮಾಹಿತಿಯನ್ನಷ್ಟೇ ಚಿತ್ರತಂಡ ಜಾಹೀರು ಮಾಡಿದೆ.