ಮಡಿಕೇರಿ : ಈ ಹಿಂದೆ ಪಠ್ಯಪುಸ್ತಕದಲ್ಲಿ ನಮ್ಮನ್ನಾಳಿದ ರಾಜರ ಸರಿಯಾದ ಇತಿಹಾಸ ಇರಲಿಲ್ಲ. ಮೆಕಾಲೆ ಶಿಕ್ಷಣ ಪದ್ಧತಿ ಇತ್ತು. ಟಿಪ್ಪುವಿನಂತಹ ದೊರೆಗಳ ವೈಭವೀಕರಣ ಇತ್ತು. ಕೆಂಪೇಗೌಡರು , ಮೈಸೂರು ರಾಜರ ಇತಿಹಾಸ ತೆಗೆಯಲಾಗಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೇಸರ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಈ ನಾಡನ್ನು ಬ್ರಿಟಿಷರಿಗೂ ಮುನ್ನ ನಮ್ಮ ರಾಜರು ವೈಜ್ಞಾನಿಕವಾಗಿ ಆಳ್ವಿಕೆ ಮಾಡಿದ್ದರು. ಉತ್ತಮ ನಗರಗಳನ್ನು, ಕೆರೆಕಟ್ಟೆಗಳನ್ನು ಕಟ್ಟಿದ್ದರು. ಪ್ರಕೃತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ತಿಳಿಸುವುದೇ ನಾಡಪ್ರಭು ಕೆಂಪೇಗೌಡ ಅವರ ರಥಯಾತ್ರೆಯ ಉದ್ದೇಶ ಎಂದರು. ಕೆಂಪೇಗೌಡರು ಎಲ್ಲರಿಗೂ ಜನಹಿತ, ಜನಪರವಾದ ಆಡಳಿತ ನೀಡಿದ್ದರು. ಇಂದಿನ ರಾಜಕಾರಣಿಗಳು, ಅಧಿಕಾರಿಗಳಿಗೆ ಮೇಲ್ಪಂಕ್ತಿಯಾಗಿದ್ದರು ಎಂದರು.
ನವೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟಿಸಲಿದ್ದಾರೆ. ಅದರ ನಿರ್ಮಾಣಕ್ಕೆ ರಾಜ್ಯದ ಎಲ್ಲ ಭಾಗಗಳಿಂದ ಪವಿತ್ರ ಮಣ್ಣನ್ನು ತರಲಾಗುತ್ತಿದೆ. ಕನಿಷ್ಠ ಪಕ್ಷ ಆ ಪ್ರತಿಮೆ ನೋಡಿಯಾದರೂ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಜನಪರ ಆಡಳಿತ ನೀಡುವ ಮಾನಸಿಕತೆ ಬರಲಿ ಎಂಬುದು ಇದರ ಉದ್ದೇಶ ಎಂದು ಹೇಳಿದರು.