ಶಿವಮೊಗ್ಗ : ಶಿವಮೊಗ್ಗದಲ್ಲಿ ತಡರಾತ್ರಿ ಭೀಕರವಾದ ಅಪಘಾತ ಸಂಭವಿಸಿದ್ದು ಈ ಒಂದು ಅಪಘಾತದಲ್ಲಿ ನವವಿವಾಹಿತ ಸಾವನಪ್ಪಿದ್ದಾನೆ. ಖಾಸಗಿ ಬಸ್ ಡಿಕ್ಕಿಯಾಗಿ ನವವಿವಾಹಿತ ಮೃತಪಟ್ಟಿರುವ ಘಟನೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ರವಿವಾರ ರಾತ್ರಿ ನಡೆದಿದೆ. ಶಾಂತಿ ನಗರದ ನಿವಾಸಿ ಅಹ್ಮದ್ (31) ಮೃತ ಯುವಕ ಎಂದು ತಿಳಿದುಬಂದಿದೆ.
ರಾಗಿಗುಡ್ಡ ಕಡೆಯಿಂದ ಬಂದ ಖಾಸಗಿ ಬಸ್ ಮಣ್ಣಿನ ದಿಬ್ಬ ಹಾರಿ ಅಡ್ಡಾದಿಡ್ಡಿ ಚಲಿಸಿದ್ದು, ಮೂರು ದ್ವಿಚಕ್ರ ವಾಹನಗಳು, ನಾಲ್ವರು ವ್ಯಕ್ತಿಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ಗಳು ಜಖಂಗೊಂಡಿದ್ದರೆ, ಪೊಲೀಸ್ ಬ್ಯಾರಿಕೇಡ್ ತುಂಡಾಗಿದೆ. ಫುಟ್‌ಪಾತ್‌ಗೆ ಅಳವಡಿಸಿದ್ದ ರೇಲಿಂಗ್ ಕೂಡ ಹಾನಿಯಾಗಿದೆ.
ಅಪಘಾತದಲ್ಲಿ, ಮೂವರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








