ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಬೀದಿನಾಯಿಗಳ ಹತ್ಯೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 200 ನಾಯಿಗಳನ್ನು ಅಮಾನವೀಯವಾಗಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಕಳೆದ ಒಂದು ವಾರದಲ್ಲಿ ಹತರಾದ ನಾಯಿಗಳ ಸಂಖ್ಯೆ ಸುಮಾರು 500ಕ್ಕೆ ಏರಿಕೆಯಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ (PTI) ಮೂಲಗಳ ಪ್ರಕಾರ, ಗ್ರಾಮ ಪಂಚಾಯತ್ ಚುನಾವಣೆ ವೇಳೆ ನೀಡಿದ್ದ “ಬೀದಿನಾಯಿಗಳ ಹಾವಳಿ ಮುಕ್ತ ಗ್ರಾಮ” ಎಂಬ ಭರವಸೆಯನ್ನು ಈಡೇರಿಸಲು ಕೆಲವು ಸರಪಂಚರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಈ ಹತ್ಯಾಕಾಂಡವನ್ನು ಸಂಘಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಐವರು ಗ್ರಾಮ ಸರಪಂಚರು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಧಿವಿಜ್ಞಾನ ಪರೀಕ್ಷೆಗೆ ಮಾದರಿಗಳ ರವಾನೆ
ಇದಕ್ಕೂ ಮೊದಲು, ಹನುಮಕೊಂಡ ಜಿಲ್ಲೆಯ ಶ್ಯಾಂಪೇಟ್ ಮತ್ತು ಅರೆಪಲ್ಲಿ ಗ್ರಾಮಗಳಲ್ಲಿ ಸುಮಾರು 300 ಬೀದಿನಾಯಿಗಳನ್ನು ಕೊಂದ ಆರೋಪದ ಮೇಲೆ ಇಬ್ಬರು ಮಹಿಳಾ ಸರಪಂಚರು ಮತ್ತು ಅವರ ಪತಿ ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.








