ವಾಷಿಂಗ್ಟನ್: ಇರಾನ್ನ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಲು ಉದ್ದೇಶಿಸಿದ್ದ ಭೀಕರ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುತೂಹಲಕಾರಿ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. “ಟೆಹ್ರಾನ್ (ಇರಾನ್ ಸರ್ಕಾರ) ಸಂಘರ್ಷ ತಡೆಯಲು 7 ದಿನಗಳ ಕಾಲಾವಕಾಶ ಕೇಳಿತ್ತು, ಆದರೆ ನಾನು ಅವರಿಗೆ 10 ದಿನಗಳ ಸಮಯ ನೀಡಿದ್ದೇನೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಇರಾನ್ನ ತೈಲ ಮತ್ತು ಅನಿಲ ಕೇಂದ್ರಗಳ ಮೇಲೆ ಅಮೆರಿಕದ ಮಿಲಿಟರಿ ದಾಳಿ ನಡೆಸುವ ಸನ್ನಾಹದಲ್ಲಿತ್ತು. ಆದರೆ, ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಈ ದಾಳಿಯನ್ನು ಸದ್ಯಕ್ಕೆ ‘ಪಾಸ್’ (Pause) ಮಾಡಲಾಗಿದೆ.
“ಅವರು (ಇರಾನ್) ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಒಂದು ವಾರ ಸಮಯ ಕೋರಿದ್ದರು. ನಾನು ಉದಾರವಾಗಿ ಅವರಿಗೆ 10 ದಿನಗಳ ಕಾಲಮಿತಿ ನೀಡಿದ್ದೇನೆ. ಈ ಅವಧಿಯಲ್ಲಿ ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಜಾಗತಿಕ ನಿಟ್ಟುಸಿರು: ಅಮೆರಿಕದ ಈ ನಿರ್ಧಾರದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಭಾರಿ ಆತಂಕ ಸದ್ಯಕ್ಕೆ ದೂರವಾಗಿದೆ. ಒಂದು ವೇಳೆ ದಾಳಿ ನಡೆದಿದ್ದರೆ ಕಚ್ಚಾ ತೈಲ ಬೆಲೆ ನಿಯಂತ್ರಣ ಮೀರಿ ಏರಿಕೆಯಾಗುವ ಭೀತಿಯಿತ್ತು.
ಈ 10 ದಿನಗಳ ಅವಧಿಯಲ್ಲಿ ಇರಾನ್ ತನ್ನ ಧೋರಣೆ ಬದಲಿಸಿಕೊಳ್ಳದಿದ್ದರೆ, ಅದರ ಇಂಧನ ವಲಯದ ಮೇಲೆ ಅಮೆರಿಕದ ಪ್ರಬಲ ದಾಳಿ ನಡೆಯುವುದು ಖಚಿತ ಎಂಬ ಮುನ್ಸೂಚನೆಯನ್ನು ಶ್ವೇತಭವನ ನೀಡಿದೆ.







