ಮುಂಬೈ:ನಾಸಿಕ್ನ ತನ್ನ ಬಿಪಿಒ ಕೇಂದ್ರದಲ್ಲಿ ಉದ್ಯೋಗಿಗಳಿಗೆ ಬಲವಂತದ ಧಾರ್ಮಿಕ ಮತಾಂತರ ಮತ್ತು ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯು ತನ್ನ ಲಕ್ಷಾಂತರ ಉದ್ಯೋಗಿಗಳಿಗೆ ಆಂತರಿಕ ಇಮೇಲ್ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ. ಘಟನೆಯನ್ನು “ತೀವ್ರ ಆಘಾತಕಾರಿ” ಎಂದು ಬಣ್ಣಿಸಿರುವ ಕಂಪನಿಯು, ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ಸುರಕ್ಷತೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಕಿರುಕುಳ, ಬಲವಂತ ಅಥವಾ ಧಾರ್ಮಿಕ ಮತಾಂತರದಂತಹ ಚಟುವಟಿಕೆಗಳನ್ನು ಟಿಸಿಎಸ್ ಸಹಿಸುವುದಿಲ್ಲ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಎಚ್ಚರಿಸಿದೆ.
ನಾಸಿಕ್ ಘಟನೆಯ ತನಿಖೆಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ವಿಶೇಷ ಆಂತರಿಕ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಆರೋಪಿಗಳ ಅಮಾನತು: ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತು ಎಫ್ಐಆರ್ ದಾಖಲಾಗಿರುವ ಎಲ್ಲಾ ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.
“ನಮ್ಮ ಉದ್ಯೋಗಿಗಳ ಸುರಕ್ಷತೆ ಮತ್ತು ಘನತೆ ನಮಗೆ ಅತ್ಯಂತ ಮುಖ್ಯ. ಕೆಲಸದ ಸ್ಥಳದ ಸಂಸ್ಕೃತಿಯನ್ನು ಹಾಳುಮಾಡುವ ಯಾವುದೇ ಶಕ್ತಿಯನ್ನು ನಾವು ಬಿಡುವುದಿಲ್ಲ” ಎಂದು ಸಂಸ್ಥೆ ತನ್ನ ಇಮೇಲ್ನಲ್ಲಿ ತಿಳಿಸಿದೆ.








