ಧಾರವಾಡ: ಪೂರ್ತಿ ಮರುಪಾವತಿ ಮಾಡಿದರೂ ಸಾಲ ವಸೂಲಾತಿ ನಿಲ್ಲಿಸದ ಧಾರವಾಡದ ಟಾಟಾ ಕ್ಯಾಪಿಟಲ್ ಫೈನಾನ್ಸ್‍ಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಆಯೋಗ ಆದೇಶ ಮಾಡಿದೆ.
ಧಾರವಾಡ ದಯಲಿಗಾರ ಓಣಿ ನಿವಾಸಿ ಅಫ್ರೀನ್ ದಫೇದಾರ ರವರು ದ್ವೀಚಕ್ರ ವಾಹನ ಖರೀದಿಸಲು ಧಾರವಾಡದ ಟಾಟಾಕ್ಯಾಪಿಟಲ್ ಫೈನಾನ್ಸ್ ನಿಂದ ದಿ:21/09/2019ರಂದು ರೂ.70,635 ಸಾಲ ಪಡೆದಿದ್ದರು. ಸಾಲ ಮರುಪಾವತಿ ನಿಯಮದಂತೆ ತಿಂಗಳಿಗೆ ರೂ.2,571 ರಂತೆ ಅವರು 42 ಕಂತುಗಳಲ್ಲಿ ದಿ:03/09/2019 ರಿಂದ ದಿ:03/04/2024ರವರೆಗೆ ಸಾಲ ಮರುಪಾವತಿ ಮಾಡಿದ್ದರು. ಪೂರ್ತಿ ಸಾಲ ಮರುಪಾವತಿಯಾಗಿದೆ ಮತ್ತು ದೂರುದಾರರಿಂದ ಯಾವುದೇ ಹಣ ಬರುವುದು ಬಾಕಿ ಇಲ್ಲಅಂತಾ ದಿ:17/04/2023ರಂದು ಎದುರುದಾರ ಫೈನಾನ್ಸ್ ನವರು ಆರ್.ಟಿ.ಓ ಕಚೇರಿಗೆ ಮಾಹಿತಿ ನೀಡಿದ್ದರು. ಪೂರ್ತಿ ಸಾಲ ಮರುಪಾವತಿ ಆಗಿದ್ದರೂ ದಿ:17/04/2023ರ ನಂತರ ದಿ:08/10/2024ರವರೆಗೆ ದೂರುದಾರರ ಕೆನರಾ ಬ್ಯಾಂಕಿನ ಎಸ್.ಬಿ. ಖಾತೆಯಿಂದ ಪ್ರತಿ ತಿಂಗಳು ಈ.ಸಿ.ಎಸ್. ಮರುಪಾವತಿ ಆಗುತ್ತಿತ್ತು. ಅದನ್ನು ನಿಲ್ಲಿಸುವಂತೆ ಹಲವುಬಾರಿ ದೂರುದಾರರು ಎದುರುದಾರರಿಗೆ ವಿನಂತಿಸಿದಳು. ವಕೀಲರ ಮೂಲಕ ಕಾನೂನು ಬದ್ಧ ನೋಟಿಸನ್ನು ಕೊಡಿಸಿದಳು. ಆದರೂ ಎದುರುದಾರ ಫೈನಾನ್ಸ್ ನವರು ಈ ಸಿ.ಎಸ್. ಮರುಪಾವತಿ ನಿಲ್ಲಿಸಿರಲಿಲ್ಲ. ಅಂತಹ ಅವರ ವರ್ತನೆ/ಕ್ರಮ ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾದುದು ಹಾಗೂ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:24/04/2024ರಂದು ದೂರು ದಾರಳು ಎದುರುದಾರ ಟಾಟಾ ಕ್ಯಾಪಿಟಲ್ ಫೈನಾನ್ಸ್ ನವರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು ದೂರುದಾರರ ಬ್ಯಾಂಕಿನ ಅಕೌಂಟ ಸ್ಟೇಟ್ ಮೆಂಟಗಳನ್ನು ಪರಿಶೀಲಿಸಿ ದಿ:19/04/2023ಕ್ಕೆ ದೂರುದಾರಳು ಪೂರ್ತಿ ಸಾಲದ ಹಣ ಮರುಪಾವತಿ ಮಾಡಿದ್ದಾಳೆ. ಈ ಬಗ್ಗೆ ದಿ:19/04/2023ರಂದು ಎದುರುದಾರ ಫೈನಾನ್ಸ್ ನವರು ದೂರುದಾರರಿಗೆ ಎನ್.ಓ.ಸಿ. ಕೊಟ್ಟಿದ್ದಾರೆ. ಆದರೂ ದೂರುದಾರರ ಎಸ್.ಬಿ. ಖಾತೆಯಿಂದ ಈ.ಸಿ.ಎಸ್. ಮರುಪಾವತಿ ದಿ:08/10/2024 ರವರೆಗೆ ಮುಂದುವರಿದಿರುವುದು ಬ್ಯಾಂಕು ಹಾಗೂ ರಿಸರ್ವ ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾಗಿದೆ. ಅಂತಹ ಎದುರುದಾರ ಟಾಟಾ ಕ್ಯಾಪಿಟಲ್ ಫೈನಾನ್ಸ್ ನವರ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಅಲ್ಲದೇ ಅವರ ಅನುಚ್ಚಿತ ವ್ಯಾಪಾರ ಪದ್ಧತಿಯನ್ನು ಎತ್ತಿ ತೋರಿಸುತ್ತದೆ ಅಂತಾ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ದೂರುದಾರರಿಂದ ಒಟ್ಟು ರೂ.24,603 ಗಳನ್ನು ಹೆಚ್ಚುವರಿಯಾಗಿ ಎದುರುದಾರರು ವಸೂಲಿ ಮಾಡಿದ್ದಾರೆ. ಸದರಿ ಹಣ ರೂ.24,603 ಮತ್ತು ಅದರ ಮೇಲೆ ಶೇ12 ದಿ:01/02/2024 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಹಿಂದಿರುಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರ ಧಾರವಾಡದ ಟಾಟಾ ಕ್ಯಾಪಿಟಲ್ ಪೈನಾನ್ಸ್‍ನವರಿಗೆ ಆದೇಶಿಸಿದೆ.