ಚೆನ್ನೈ: ಮಗಳ ಮದುವೆಗೆ ಸ್ಥಳೀಯರೊಬ್ಬರು ತಮ್ಮ ಜಮೀನು ಮಾರಲು ಯತ್ನಿಸಿದ ವೇಳೆ ಇಡೀ ಗ್ರಾಮವನ್ನೇ ವಕ್ಫ್ ಮಂಡಳಿ ತನ್ನ ಒಡೆತನಕ್ಕೆ ಮಾಡಿಕೊಂಡಿರುವ ಆಘಾತಕಾರಿ ಪ್ರಕರಣವೊಂದು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಎನ್ ರಾಜಗೋಪಾಲ್ ಎಂಬುವವರು ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂಡುರೈ ಗ್ರಾಮದಲ್ಲಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಲು ಬಯಸಿದ್ದರು. ಈ ವೇಳೆ ಅವರು ಹೊಂದಿರುವ 1.2 ಎಕರೆ ಜಮೀನು ತಮಿಳುನಾಡು ವಕ್ಫ್ ಮಂಡಳಿಗೆ ಸೇರಿರುವ ವಿಚಾರ ಬೆಳಕಿಗೆ ಬಂದಿದೆ. ಅದನ್ನು ಮಾರಾಟ ಮಾಡಲು ಬಯಸಿದರೆ, ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್ಒಸಿ) ತೆಗೆದುಕೊಳ್ಳಬೇಕಾಗುತ್ತದೆ ಎನ್ನಲಾಗುತ್ತಿದೆ.
ಮುಂದೆ ವಿಚಾರಿಸಿದಾಗ ಇಡೀ ತಿರುಚೆಂದೂರೈ ಗ್ರಾಮ ವಕ್ಫ್ ಬೋರ್ಡ್ಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕುತೂಹಲಕಾರಿಯಾಗಿ, ಗ್ರಾಮವು ಹಿಂದೂ ಪ್ರಾಬಲ್ಯದ ಪ್ರದೇಶವಾಗಿದ್ದು, ಎರಡು ಸಮುದಾಯಗಳು ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ರಾಜಗೋಪಾಲ್ ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಗೋಪಾಲ್, 1996 ರಲ್ಲಿ ಗ್ರಾಮದಲ್ಲಿ ಒಂದು ತುಂಡು ಭೂಮಿಯನ್ನು ಖರೀದಿಸಿದ್ದೆ ಮತ್ತು ಅದು ವಕ್ಫ್ ಬೋರ್ಡ್ ಜಮೀನಾಗಿರಲಿಲ್ಲ. ತನ್ನ ಬಳಿ ಜಮೀನಿನ ಎಲ್ಲಾ ದಾಖಲೆಗಳಿವೆ. ಆದರೆ ಅದನ್ನು ಮಾರಾಟ ಮಾಡಲು ಬಯಸಿದಾಗ ರಿಜಿಸ್ಟ್ರಾರ್ ಅದು ವಕ್ಫ್ ಮಂಡಳಿಗೆ ಸೇರಿದ್ದು, ಅದನ್ನು ಮಾರಾಟ ಮಾಡಲು ಅನುಮತಿ ಪಡೆಯಬೇಕು ಎಂದೇಳಿದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಗಳ ಮದುವೆಗಾಗಿ ಜಮೀನು ಮಾರಲು ಬಯಸಿದ್ದೆ. ಆದರೆ ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ಮದುವೆ ನಿಂತು ಹೋಗಿದೆ ಎಂದು ರಾಜಗೋಪಾಲ್ ಒತ್ತಿ ಹೇಳಿದರು.
ತಿರುಚೆಂತುರೈ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಕಾವೇರಿ ನದಿಯ ದಡದಲ್ಲಿರುವ ಒಂದು ಹಳ್ಳಿಯಾಗಿದೆ.