ನವದೆಹಲಿ : ಐಸಿಸಿ ಟಿ20 ವಿಶ್ವಕಪ್ ಈ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದೆ. ಇದಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾದಿದ್ದು ಶುಕ್ರವಾರದಂದು ಈ ಕಾಯುವಿಕೆ ಅಂತ್ಯಗೊಂಡಿದೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ತಲಾ ಐದರಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ವೆಸ್ಟ್ ಇಂಡೀಸ್ 2010 ರಲ್ಲಿ T20 ವಿಶ್ವಕಪ್ ಆಯೋಜಿಸಿತ್ತು. ಆದ್ರೆ, ಅದರ ನಂತರ ಅದು ಈಗ ಮತ್ತೊಮ್ಮೆ ಆತಿಥೇಯವಾಗಿದೆ. ಆದ್ರೆ, ಈ ಬಾರಿ ಅದು ಅಮೆರಿಕದೊಂದಿಗೆ ಜಂಟಿ ಆತಿಥ್ಯ ವಹಿಸಿದೆ. ಮೊದಲ ಬಾರಿಗೆ ಅಮೆರಿಕ ಕ್ರಿಕೆಟ್ ವಿಶ್ವಕಪ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.
ಐಸಿಸಿ ಎ, ಬಿ, ಸಿ, ಡಿ ಎಂಬ ನಾಲ್ಕು ಗುಂಪುಗಳನ್ನು ಮಾಡಿದೆ ಮತ್ತು ಪ್ರತಿ ಗುಂಪಿನಲ್ಲಿ ಐದು ತಂಡಗಳಿವೆ. ಗುಂಪು ಹಂತದ ನಂತರ ಮತ್ತೆ ಸೂಪರ್-8 ಇರುತ್ತದೆ. ಇದಾದ ನಂತರ ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ. ಕೊನೆಯ T20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆದಿತ್ತು, ಇದರಲ್ಲಿ ಇಂಗ್ಲೆಂಡ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಭಾರತ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಹೊರಬಿದ್ದಿತ್ತು. ಮೊದಲ ಪಂದ್ಯ ಜೂನ್ 1 ರಂದು ಉಗಾಂಡಾ ಮತ್ತು ಅಮೆರಿಕ ನಡುವೆ ನಡೆಯಲಿದೆ. ಜೂನ್ 29 ರಂದು ಫೈನಲ್ ಪಂದ್ಯ ನಡೆಯಲಿದೆ.
ಗುಂಪುಗಳು ಹೀಗಿವೆ.!
ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ತಂಡದ ಜೊತೆಗೆ ಉಳಿದ ನಾಲ್ಕು ತಂಡಗಳು ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಅಮೆರಿಕ. ಆದರೆ ಬಿ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಒಮಾನ್ ಇವೆ. ಸಿ ಗುಂಪಿನಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ಸೇರಿವೆ. ಡಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಜೊತೆಗೆ ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ ಮತ್ತು ನೇಪಾಳ ಸೇರಿವೆ.
ವೇಳಾಪಟ್ಟಿ ಹೇಗಿದೆ.?
ಗುಂಪು ಹಂತವು ಜೂನ್ 1 ರಿಂದ ಪ್ರಾರಂಭವಾಗಲಿದ್ದು, ಜೂನ್ 18 ರವರೆಗೆ ಮುಂದುವರಿಯುತ್ತದೆ. ಇದಾದ ನಂತರ ಜೂನ್ 24ರವರೆಗೆ ಸೂಪರ್-8 ಹಂತ ನಡೆಯಲಿದೆ. ಭಾರತ ತಂಡ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಪಂದ್ಯವನ್ನು ಆಡಲಿದೆ. ಆದರೆ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಈ ತಂಡ ಜೂನ್ 12 ರಂದು ಅಮೆರಿಕ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಆಡಲಿದೆ. ಭಾರತ ತನ್ನ ಮೊದಲ ಮೂರು ಪಂದ್ಯಗಳನ್ನು ನ್ಯೂಯಾರ್ಕ್‌ನಲ್ಲಿ ಆಡಬೇಕಿದ್ದರೆ, ತಂಡವು ಕೆನಡಾ ವಿರುದ್ಧ ಫ್ಲೋರಿಡಾದಲ್ಲಿ ಪಂದ್ಯವನ್ನು ಆಡಲಿದೆ.