ಮೈಸೂರು: ಇಂದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು, ಇದು 17ನೇ ಸೆಪ್ಟೆಂಬರ್ 2024 ರಿಂದ 1 ಅಕ್ಟೋಬರ್ 2024 ರವರೆಗೆ ನಡೆಯುತ್ತದೆ.
ಈ ಬಗ್ಗೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಪಿಆರ್ ಓ ಆಗಿರುವಂತ ಗಿರೀಶ್ ಧರ್ಮರಾಜ್ ಕಲಗೊಂಡ ಅವರು ಮಾಹಿತಿ ಹಂಚಿಕೊಂಡಿದ್ದು, ಇಂದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸುವ ಮೂಲಕ ಪ್ರಾರಂಭಿಸಿದರು. ನಂತರ ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಸಸಿಗಳನ್ನು ನೆಡಲಾಯಿತು.
17ನೇ ಸೆಪ್ಟೆಂಬರ್ 2024 ರಂದು ಪ್ರಾರಂಭವಾದ ವ್ಯಾಪಕವಾದ ಸ್ವಚ್ಛತಾ ಸೇವಾ ಅಭಿಯಾನದ ಭಾಗವಾಗಿ, ಈ ಉಪಕ್ರಮವು ರೈಲ್ವೆ ನಿಲ್ದಾಣಗಳು, ರೈಲುಗಳು, ಕಛೇರಿಗಳು ಮತ್ತು ಇತರ ರೈಲ್ವೆ ಆವರಣಗಳಲ್ಲಿ ಸ್ವಚ್ಛತೆಯನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ರೈಲ್ವೆ ನೌಕರರು ಮತ್ತು ಸಾರ್ವಜನಿಕರನ್ನು ತೊಡಗಿಸುತ್ತದೆ. ಸ್ವಚ್ಛತಾ ಅಭಿಯಾನವು 1 ಅಕ್ಟೋಬರ್ 2024 ರಂದು ಮುಕ್ತಾಯಗೊಳ್ಳಲಿದೆ ಮತ್ತು ಸ್ವಚ್ಛ ಪರಿಸರ, ನೈರ್ಮಲ್ಯ ಅಭ್ಯಾಸಗಳು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಅಗರ್ವಾಲ್ ರವರು ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು ಮತ್ತು ಅಭಿಯಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಪ್ರೋತ್ಸಾಹಿಸಿದರು. ಈ ಅಭಿಯಾನವು ಸ್ವಚ್ಛತೆಯ ಪಾಲುದಾರಿಕೆ ಮತ್ತು ಸಂಪೂರ್ಣ ಸ್ವಚ್ಛತೆಯಂತಹ ವಿವಿಧ ವಿಷಯಗಳ ಅಡಿಯಲ್ಲಿ ರಚನೆಯಾಗಿದೆ ಹಾಗೂ ಎಲ್ಲಾ ರೈಲ್ವೆ ಸೌಲಭ್ಯಗಳಲ್ಲಿ ಶುಚಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದೆ.
ಸ್ವಚ್ಛತಾ ಪಖ್ವಾಡಾ ಅಭಿಯಾನವು ಶುಚಿತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಸಿಬ್ಬಂದಿಗಳು, ಅವರ ಕುಟುಂಬ ಮತ್ತು ಸ್ವಚ್ಛತಾ ಕಾರ್ಮಿಕರು ಸ್ವಚ್ಛತೆಯನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ಮಾಡುತ್ತಾರೆ. ನೈರ್ಮಲ್ಯದ ಮಹತ್ವದ ಕುರಿತು ನೌಕರರು ಮತ್ತು ಪ್ರಯಾಣಿಕರಿಗೆ ಅರಿವು ಮೂಡಿಸಲು ಸಾರ್ವಜನಿಕ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಸ್ವಚ್ಛತಾ ಕರ್ಮಚಾರಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಮತ್ತು “ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಮರ)” ಎಂಬ ಹಸಿರು ಉಪಕ್ರಮದ ಭಾಗವಾಗಿ ಸಸಿಗಳನ್ನು ನೆಡಲಾಗುವುದು ಎಂದರು.
ತ್ಯಾಜ್ಯವನ್ನು ಕಡಿಮೆ ಮಾಡಲು, ತ್ಯಾಜ್ಯವನ್ನು ಮರುಬಳಕೆ ಮಾಡಿ ಬಳಸಲು ಜನರನ್ನು ಉತ್ತೇಜಿಸುವ ಮೂಲಕ ಈ ಅಭಿಯಾನವು ಕಸದ ನಿರ್ವಹಣೆಯಲ್ಲೂ ಗಮನ ಹರಿಸುತ್ತದೆ, ಪ್ರತಿ ಮನೆಯಲ್ಲೂ ತ್ಯಾಜ್ಯವನ್ನು ಬೇರ್ಪಡಿಸುವುದು ಮತ್ತು ತ್ಯಾಜ್ಯ ವಸ್ತುಗಳಿಂದ ಕಲೆ ರಚಿಸುವಂತಹ ಚಟುವಟಿಕೆಗಳೊಂದಿಗೆ, ರೈಲ್ವೆ ನಿಲ್ದಾಣಗಳು, ಕಾಲೋನಿಗಳು ಮತ್ತು ರೈಲುಗಳಲ್ಲಿ ದೊಡ್ಡ ಪ್ರಮಾಣದ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗುವುದು ಮತ್ತು ಶೌಚಾಲಯಗಳು ಮತ್ತು ಜಲಮೂಲಗಳಂತಹ ಸಾರ್ವಜನಿಕ ಸೌಲಭ್ಯಗಳನ್ನು ಸಹ ಸ್ವಚ್ಛಗೊಳಿಸಲಾಗುತ್ತದೆ. ಹೆಚ್ಚುವರಿಯಾಗಿ, ಸಾರ್ವಜನಿಕರು ಮತ್ತು ರೈಲ್ವೆ ಸಿಬ್ಬಂದಿಯನ್ನು ಒಳಗೊಳ್ಳಲು ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆಗಳು ಮತ್ತು ಕಲಾ ಪ್ರದರ್ಶನಗಳನ್ನು ನಡೆಸಲಾಗುವುದು, ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ವಿಭಾಗವು 2ನೇ ಅಕ್ಟೋಬರ್ 2024 ರಂದು, ಗಾಂಧಿ ಜಯಂತಿ ಆಚರಣೆಯ ಭಾಗವಾಗಿ ರೈಲ್ವೆ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲು ರೈಲ್ವೆ ಸಿಬ್ಬಂದಿ, ಪ್ರಯಾಣಿಕರು ಮತ್ತು ಸ್ಥಳೀಯ ವ್ಯಕ್ತಿಗಳನ್ನು ಒಳಗೊಂಡ ಸಂಯೋಜಿತ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರಯಾಣಿಕರಿಗೆ ಜೈವಿಕ ಶೌಚಾಲಯಗಳ ಬಳಕೆಯ ಬಗ್ಗೆ ತಿಳುವಳಿಕೆ ನೀಡಲಾಗುವುದು ಮತ್ತು ರೈಲ್ವೆ ಸೌಲಭ್ಯಗಳಲ್ಲಿನ ಸ್ವಚ್ಛತೆಯ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುತ್ತದೆ. ಈ ಅಭಿಯಾನವು ಶುದ್ಧತೆಯನ್ನು ಕಾಪಾಡುವಲ್ಲಿ ತೊಡಗಿರುವ ಸ್ವಚ್ಛತಾ ಕಾರ್ಮಿಕರು ಮತ್ತು ಸ್ವಚ್ಛತಾ ಸೇವೆ 2024 ರಲ್ಲಿ ಭಾಗವಹಿಸಿದವರನ್ನು ಗೌರವಿಸುವ ಪ್ರಶಸ್ತಿ ಸಮಾರೋಪ ಸಮಾರಂಭದೊಂದಿಗೆ ಅಂತ್ಯಗೊಳ್ಳುತ್ತದೆ.
ಕಳೆದ ಎರಡು ವರ್ಷಗಳಿಂದ ಸ್ವಚ್ಛತೆಯಲ್ಲಿ ಅನುಕರಣೀಯ ಕಾರ್ಯಕ್ಕಾಗಿ “ಸ್ವಚ್ಛತಾ ಶೀಲ್ಡ್ (ಸ್ವಚ್ಛತೆಯ ಪಲಕ)“ ಪಡೆದಿರುವ ನೈಋತ್ಯ ರೈಲ್ವೆಯು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಬದ್ಧವಾಗಿದೆ. ನಿಲ್ದಾಣಗಳು, ಆಸ್ಪತ್ರೆಗಳು, ಡಿಪೋಗಳು ಮತ್ತು ಇತರ ಘಟಕಗಳು ಸೇರಿದಂತೆ ಎಲ್ಲಾ ರೈಲ್ವೆ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಳ್ಳಲು , ಸ್ವಚ್ಛ ಮತ್ತು ಹಸಿರಾದ ರೈಲ್ವೆ ಪರಿಸರವನ್ನು ಕಾಪಾಡಿಕೊಳ್ಳಲು ಮತ್ತು ಇಲಾಖೆಗೆ ಕೊಡುಗೆ ನೀಡಲು ಪ್ರೋತ್ಸಾಹಿಸಲಾಗುತ್ತದೆ.
‘KKRTC’ಯ ಮೃತ ನೌಕರರ ನಾಮನಿರ್ದೇಶಿತರಿಗೆ 1.40 ಕೋಟಿ ಪರಿಹಾರ ವಿತರಿಸಿದ ‘ಸಚಿವ ರಾಮಲಿಂಗಾರೆಡ್ಡಿ’
BREAKING : ದೇಶಾದ್ಯಂತ ‘ಬುಲ್ಡೋಜರ್ ಕಾರ್ಯಚರಣೆ’ಗೆ ‘ಸುಪ್ರೀಂಕೋರ್ಟ್’ ತಡೆ