ಅರಸೀಕೆರೆ, ಜು.26:”ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೇವಾಲ ಅವರು ಯಾವ ಅಧಿಕಾರಿಗಳನ್ನೂ ಭೇಟಿ ಮಾಡಿಲ್ಲ, ಮಾತನಾಡಿಲ್ಲ. ಉದಾಹರಣೆಗೆ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯದವರೇ ಆದರೂ ಇದುವರೆಗೂ ಯಾವ ಅಧಿಕಾರಿಗೂ ಫೋನ್ ಕರೆ ಕೂಡ ಮಾಡಿಲ್ಲ, ಮಾಡುವುದೂ ಇಲ್ಲ. ಅಧಿಕಾರಿಗಳ ಸಭೆ ಮಾಡಿದ್ದಾರೆ ಎಂಬುದು ಸುಳ್ಳು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರಬೆಟ್ಟ ಹಾಗೂ ಕೋಡಿ ಮಠದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶನಿವಾರ ಅವರು ಪ್ರತಿಕ್ರಿಯೆ ನೀಡಿದರು.ಸುರ್ಜೇವಾಲ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ಸರ್ಕಾರ ನಮ್ಮದೇ ಇದೆ. ಏನಾದರೂ ಹೇಳಬೇಕೆಂದರೆ ಅವರು ನಮಗೆ ಹೇಳುತ್ತಾರೆ. ಏನಾದರೂ ತಪ್ಪುಗಳಿದ್ದರೆ ನಮಗೆ ತಿಳಿಸುತ್ತಾರೆ, ನಾವು ತಿದ್ದಿಕೊಳ್ಳುತ್ತೇವೆ. ಇದನ್ನು ಹೊರತಾಗಿ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂಬುದು ಸುಳ್ಳು” ಎಂದರು.
ದೊಡ್ಡವರ ಬಗ್ಗೆ ಮಾತಾಡುವುದಿಲ್ಲ
ಅಧಿಕಾರಿಗಳ ಸಭೆ ಕಾನೂನುಬಾಹಿರ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ಉತ್ತರ ನೀಡಿದ್ದಾರಲ್ಲ. ಅವರು ಉತ್ತರ ನೀಡಿದ ಮೇಲೆ ನಾನೇನು ಉತ್ತರ ನೀಡುವುದಿದೆ. ಮುಖ್ಯಮಂತ್ರಿಯವರಿಗೆ ನನಗಿಂತ ಹೆಚ್ಚು ಮಾಹಿತಿಯಿದೆ” ಎಂದು ಹೇಳಿದರು.
ಯೂರಿಯಾ ಕೊರತೆ ಬಗ್ಗೆ ಕೇಳಿದಾಗ, “ಯೂರಿಯಾವನ್ನು ಸರಬರಾಜು ಮಾಡುವುದು ಕೇಂದ್ರ ಸರ್ಕಾರ. ನಮ್ಮ ರೈತರು ಈ ಭಾರಿ ಹೆಚ್ಚಿನ ಬಿತ್ತನೆ ಮಾಡಿದ್ದಾರೆ. ಹೆಚ್ಚಿನ ಯೂರಿಯಾಗೆ ಈಗಾಗಲೇ ಒತ್ತಾಯವನ್ನು ಮಾಡಿದ್ದೇವೆ. ರೈತರು ತಾಳ್ಮೆಯಿಂದಿರಲಿ. ಮುಖ್ಯಮಂತ್ರಿಯವರು ಹಾಗೂ ಕೃಷಿ ಸಚಿವರು ಇದರ ಬಗ್ಗೆ ಮಾತನಾಡಿದ್ದಾರೆ” ಎಂದರು.
ಭಕ್ತ, ಭಗವಂತನಿಗೆ ಬಿಟ್ಟ ವಿಚಾರ
ಸಿದ್ದೇಶ್ವರನ ಬಳಿ ವೈಯಕ್ತಿಕವಾಗಿ ಏನಾದರೂ ಬೇಡಿಕೊಂಡಿರಾ ಎಂದು ಕೇಳಿದಾಗ, “ಅದು ಭಕ್ತ ಹಾಗೂ ಭಗವಂತನಿಗೆ ಬಿಟ್ಟ ವಿಚಾರ ಎಂದು” ಉತ್ತರಿಸಿದರು.
“ಜೇನುಕಲ್ಲು ಸಿದ್ದೇಶ್ವರನಿಗೆ ನಮನ ಸಲ್ಲಿಸಿ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ಅಭಿವೃದ್ಧಿ ಕೆಲಸಗಳು ಆಗುತ್ತವೆ. ನನಗೂ ದೇವರ ದರ್ಶನ ಭಾಗ್ಯ ಸಿಕ್ಕಿದೆ. ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇನೆ” ಎಂದರು.
“ನಮ್ಮ ಧರ್ಮ, ದೇವರು, ಸಂಸ್ಕೃತಿ ಆಚಾರ, ವಿಚಾರಗಳ ಬಗ್ಗೆ ನಂಬಿಕೆ ಇರುವ ವ್ಯಕ್ತಿ ನಾನು. ಯಾವುದೇ ಧರ್ಮವಾಗಿರಲಿ ಅದಕ್ಕೆ ಆದಂತಹ ಶಕ್ತಿ ಇದೆ. ಕೆಲವರು ನಂಬಬಹುದು ಕೆಲವರು ನಂಬದೇ ಇರಬಹುದು ಆದರೆ ನನಗೆ ನಂಬಿಕೆಯಿದೆ. ದೇವಸ್ಥಾನವನ್ನು ಚೆನ್ನಾಗಿ ಅಭಿವೃದ್ಧಿ ಮಾಡಲಾಗಿದೆ. ಸಿದ್ದೇಶ್ವರ ರಾಜ್ಯದ ಜನರಿಗೆ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದರು.
“ಇಷ್ಟು ದೂರ ಬಂದಿದ್ದೇನೆ. ಬಹಳ ವರ್ಷಗಳ ನಂತರ ಭೇಟಿ ನೀಡಿದ್ದೇನೆ. ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಇದ್ದಾರೆ ಎಂದು ತಿಳಿದು, ಅವರನ್ನು ಭೇಟಿ ಮಾಡಲು ಬಂದೆ” ಎಂದು ಹೇಳಿದರು.