ನವದೆಹಲಿ: ಜೈಲಿನಲ್ಲಿರುವ ಅಪರಾಧಿಗಳ ಪರವಾಗಿ ವಾದ ಮಂಡಿಸಲು ನ್ಯಾಯಾಲಯದ ವತಿಯಿಂದಲೇ ‘ಅಮಿಬಸ್ ಕ್ಯೂರಿ’ (Amicus Curiae) ಅಥವಾ ನ್ಯಾಯಾಲಯದ ಮಿತ್ರರನ್ನು ನೇಮಿಸುವ ಮೊದಲು ಸಂಬಂಧಪಟ್ಟ ಅಪರಾಧಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.
ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟಬಂದ ವಕೀಲರನ್ನು ನೇಮಿಸಿಕೊಳ್ಳುವ ಅಥವಾ ತನ್ನ ಪರವಾಗಿ ಯಾರು ವಾದ ಮಾಡಬೇಕು ಎಂದು ತಿಳಿಯುವ ಹಕ್ಕಿದೆ. ಅಪರಾಧಿಗೆ ತಿಳಿಸದೆಯೇ ಏಕಾಏಕಿ ನ್ಯಾಯಾಲಯದ ವತಿಯಿಂದ ವಕೀಲರನ್ನು ನೇಮಿಸುವುದು ಆತನ ಕಾನೂನಾತ್ಮಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾ. ಬಿ.ಆರ್. ಗವಾಯಿ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ತೀರ್ಪು ನೀಡಿದ್ದು, “ಅಪರಾಧಿಯು ತನ್ನ ಸ್ವಂತ ವಕೀಲರನ್ನು ವ್ಯವಸ್ಥೆ ಮಾಡಿಕೊಳ್ಳಲು ಇಚ್ಛಿಸುತ್ತಾನೆಯೇ ಅಥವಾ ಕಾನೂನು ನೆರವು ಸಮಿತಿಯಿಂದ ವಕೀಲರನ್ನು ಬಯಸುತ್ತಾನೆಯೇ ಎಂಬುದನ್ನು ಮೊದಲು ಕೇಳಬೇಕು” ಎಂದು ಹೇಳಿದೆ.
ಅಮಿಬಸ್ ಕ್ಯೂರಿ ಪಾತ್ರ: ಕೆಲವು ಸಂದರ್ಭಗಳಲ್ಲಿ ಅಪರಾಧಿಗಳ ಪರವಾಗಿ ವಕೀಲರು ಇಲ್ಲದಿದ್ದಾಗ, ನ್ಯಾಯಾಲಯವು ಪ್ರಕರಣದ ತಾಂತ್ರಿಕ ಅಂಶಗಳನ್ನು ವಿವರಿಸಲು ಸ್ವತಂತ್ರ ವಕೀಲರನ್ನು (ಅಮಿಬಸ್ ಕ್ಯೂರಿ) ನೇಮಿಸುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಅಪರಾಧಿಯ ಸಮ್ಮತಿ ಅಥವಾ ಮಾಹಿತಿ ಇರುವುದು ಅತ್ಯಗತ್ಯ ಎಂದು ಕೋರ್ಟ್ ಒತ್ತಿಹೇಳಿದೆ.
ಎಲ್ಲಾ ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೈಲು ಅಧಿಕಾರಿಗಳ ಮೂಲಕ ಅಪರಾಧಿಗೆ ಈ ಬಗ್ಗೆ ನೋಟಿಸ್ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
”ಅಪರಾಧಿಯೊಬ್ಬ ಜೈಲಿನಲ್ಲಿದ್ದಾನೆ ಎಂಬ ಕಾರಣಕ್ಕೆ ಆತನಿಗೆ ತನ್ನ ಕಾನೂನು ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕನ್ನು ನಿರಾಕರಿಸಲಾಗದು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆಯ ಸಮಾನ ಅವಕಾಶವಿರಬೇಕು” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಮಾರ್ಮಿಕವಾಗಿ ಹೇಳಿದೆ.








